ನವದೆಹಲಿ:- ಸಾರ್ವತ್ರಿಕ ಚುನಾವಣೆಗಳಲ್ಲಿ ವಿವಿ ಪ್ಯಾಟ್ ರಶೀದಿಗಳನ್ನು ಇವಿಎಂಗಳೊಂದಿಗೆ ಹೋಲಿಕೆ ಮಾಡುವ ಪ್ರಮಾಣವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿ 21 ವಿರೋಧ ಪಕ್ಷಗಳ ನಾಯಕರು ಸಲ್ಲಿಸಿರುವ ಪುನರ್ ಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಮುಂದಿನ ವಾರ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಸಮ್ಮತಿಸಿದೆ.
ಪ್ರತಿ ವಿಧಾನಸಭಾ ಕ್ಷೇತ್ರದ 1 ಮತಗಟ್ಟೆ ಬದಲಿಗೆ 5 ಮತಗಟ್ಟೆಗಳಲ್ಲಿ ಚಲಾವಣೆಯಾಗುವ ವಿವಿ ಪ್ಯಾಟ್ ರಶೀದಿಗಳನ್ನು ಇವಿಎಂಗಳೊಂದಿಗೆ ಹೋಲಿಕೆ ಮಾಡುವಂತೆ ಸರ್ವೋಚ್ಛ ನ್ಯಾಯಾಲಯ ಏ. 8 ರಂದು ಚುನಾವಣಾ ಆಯೋಗಕ್ಕೆ ಸೂಚನೆ ನೀಡಿತ್ತು.
ಆಂಧ್ರಪ್ರದೇಶದ ಮುಖ್ಯಮಂತ್ರಿ ಎಂ. ಚಂದ್ರಬಾಬುನಾಯ್ಡು ನೇತೃತ್ವದ ಪ್ರತಿಪಕ್ಷಗಳ ಮುಖಂಡರು ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಪುನರ್ ಪರಿಶೀಲಿಸುವಂತೆ ಮನವಿ ಸಲ್ಲಿಸಿದರು.
ಈ ಕುರಿತು ತುರ್ತು ವಿಚಾರಣೆಯನ್ನು ಕೈಗೆತ್ತಿಕೊಳ್ಳಬೇಕೆಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹಾಗೂ ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರಿದ್ದ ನ್ಯಾಯಪೀಠಕ್ಕೆ ಮನವಿ ಮಾಡಲಾಗಿತ್ತು.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ಮನವಿ ಕುರಿತ ವಿಚಾರಣೆಯನ್ನು ಮುಂದಿನವಾರ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.
ಸಿಂಘ್ವಿ ಅವರ ಮನವಿಗೆ ಸ್ಪಂದಿಸಿದ ನ್ಯಾಯಪೀಠ, ಮುಂದಿನ ವಾರ ಈ ಕುರಿತು ವಿಚಾರಣೆ ನಡೆಸುವುದಾಗಿ ಹೇಳಿದೆ.