ನವದೆಹಲಿ: ಮೇ 5ರಿಂದ ರಂಜಾನ್ ಪ್ರಾರಂಭವಾಗುತ್ತಿದೆ ಹಾಗೂ ಬಹುತೇಕ ರಾಜ್ಯಗಳಲ್ಲಿ ಬಿಸಿಲು ಮಿತಿ ಮೀರುತ್ತಿರುವ ಕಾರಣ ಲೋಕಸಭಾ ಚುನಾವಣೆಯ ಮುಂಬರುವ ಹಂತಗಳಲ್ಲಿ ಮತದಾನ ಕಡಿಮೆಯಾಗಬಹುದು. ಹಾಗಾಗಿ ಮತದಾನದ ಸಮಯ ಬದಲಾವಣೆ ಮಾಡಲು ಸುಪ್ರೀಂಕೋರ್ಟ್ಗೆ ಸಲ್ಲಿಕೆಯಾದ ಮನವಿ ಬಗ್ಗೆ ಸೂಕ್ತ ನಿರ್ಧಾರ ನೀವೇ ಕೈಗೊಳ್ಳಬಹುದೇ ಎಂದು ಕೋರ್ಟ್ ಚುನಾವಣಾ ಆಯೋಗಕ್ಕೆ ತಿಳಿಸಿದೆ.
ಮೇ 6, 12, 19ರಂದು ರಾಜಸ್ಥಾನ ಸೇರಿ ಹಲವು ರಾಜ್ಯಗಳಲ್ಲಿ ಮತದಾನ ನಡೆಯಲಿದೆ. ಮೇ 5ರಿಂದ ಮುಸ್ಲಿಮರಿಗೆ ರಂಜಾನ್ ತಿಂಗಳು ಪ್ರಾರಂಭವಾಗಲಿದೆ. ಈ ದಿನಗಳಲ್ಲಿ ಮುಸ್ಲಿಮರು ದಿನವಿಡೀ ಸಾಲಿನಲ್ಲಿ ನಿಂತು ಮತದಾನ ಮಾಡಲು ಸಾಧ್ಯವಿಲ್ಲ. ಅದಲ್ಲದೆ, ರಾಜಸ್ಥಾನ ಸೇರಿ ಹಲವು ಪ್ರದೇಶಗಳಲ್ಲಿ ಬಿಸಿಲು ಕೂಡ ವಿಪರೀತ ಹೆಚ್ಚಾಗುತ್ತಿದ್ದು ಇದೇ ಕಾರಣಕ್ಕೆ ಜನರು ಹೊರಬರುವುದಿಲ್ಲ. ಹಾಗಾಗಿ ಮತದಾನವನ್ನು ಬೆಳಗ್ಗೆ 7 ಗಂಟೆ ಬದಲಾಗಿ ಮುಂಜಾನೆ 5ಕ್ಕೆ ಪ್ರಾರಂಭಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಚುನಾವಣೆ ಪ್ರಾರಂಭವಾದ ಮೇಲೆ ಚುನಾವಣಾ ಆಯೋಗದ ಕೆಲಸಗಳಲ್ಲಿ ಸುಪ್ರೀಂಕೋರ್ಟ್ ಹಸ್ತಕ್ಷೇಪ ಮಾಡುವಂತಿಲ್ಲದ ಕಾರಣ ಬಿಸಿಲು ಮತ್ತು ರಂಜಾನ್ ಕಾರಣಕ್ಕೆ ಮತದಾನದ ಸಮಯವನ್ನು ಮರು ಪರಿಷ್ಕರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಬಿಟ್ಟಿದೆ.ಈಗ ನಡೆದ ಐದು ಹಂತದ ಮತದಾನ ಬೆಳಗ್ಗೆ 7ರಿಂದ ಪ್ರಾರಂಭವಾಗಿತ್ತು.