janadhvani

Kannada Online News Paper

ಅರಸಿಕೆರೆ : ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಪೋಟಕ್ಕೂ, ಬುರ್ಖಾ ನಿಷೇಧಕ್ಕೂ ತಳಕು ಹಾಕುತ್ತಿರುವ ಮಾಧ್ಯಮ‌ ವರದಿಗಳನ್ನು ತೀವ್ರವಾಗಿ ಖಂಡಿಸಿದ ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಮೌಲಾನ ಶಾಫಿ ಸಅದಿ ಬೆಂಗಳೂರು, ಭಯೋತ್ಪಾದಕರಿಗೆ ಬುರ್ಖಾದ ಅಗತ್ಯವಿರುವುದಿಲ್ಲ ಎಂಬುದನ್ನು ಪ್ರಜ್ಞಾ ಸಿಂಗ್ ಠಾಕೂರು ಸಾಬೀತು ಮಾಡಿದ್ದಾರೆ ಎಂದು ಹೇಳಿದರು.

ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆಯುತ್ತಿರುವ ಬೃಹತ್ ಸುನ್ನೀ ಇಜ್ತಿಮಾದಲ್ಲಿ ಮುಖ್ಯ ಭಾಷಣ ಮಾಡುತ್ತಾ ಅವರು ಹೇಳಿದರು. ಭಯೋತ್ಪಾದನೆಗೂ, ಧರ್ಮಕ್ಕೂ ನಂಟು ಕಲ್ಪಿಸುವ ವ್ಯರ್ಥ ಕೆಲಸವನ್ನು ಕೆಲವು ಮಾಧ್ಯಮಗಳು ಮಾಡುತ್ತಿದೆ. ಒಬ್ಬ ನೈಜ ಮುಸಲ್ಮಾನ ಉಗ್ರವಾದದತ್ತ ಹೆಜ್ಜೆ ಇಡಲು ಸಾಧ್ಯವಿಲ್ಲ. ಆತ್ಮಹತ್ಯೆಯನ್ನು ಪವಿತ್ರವಾದ ಖುರ್ ಆನ್ ಕಠಿಣವಾಗಿ ವಿರೋಧಿಸಿರುವಾಗ ಮುಸಲ್ಮಾನನೊಬ್ಬ ಸುಸೈಡ್ ಬಾಂಬರ್ ಆಗಲು ಸಾಧ್ಯವಿಲ್ಲವೆಂದು ಅವರು ಹೇಳಿದರು.

ಶ್ರೀಲಂಕಾ ಸ್ಪೋಟದ ಹೆಸರಿನಲ್ಲಿ ಇಸ್ಲಾಮಿನ ಮಹಿಳೆಯರ ರಕ್ಷಾ ಕವಚವಾದ ಬುರ್ಖಾವನ್ನು ನಿಷೇಧ ಮಾಡಬೇಕೆಂಬ ಕೂಗಿಗೆ ಯಾವುದೇ ಅರ್ಥವಿಲ್ಲ. ಭಯೋತ್ಪಾದಕರಿಗೆ, ವಿಧ್ವಂಸಕ ಕೃತ್ಯದಲ್ಲಿ ತೊಡಗಿಸಿಕೊಳ್ಳುವವರಿಗೆ ಬುರ್ಖಾದ ಅಗತ್ಯವಿಲ್ಲ ಎಂಬುದನ್ನು ಈ ಹಿಂದೆ ನಡೆದ ಮಕ್ಕಾ ಮಸ್ಜಿದ್ ಇನ್ನಿತರ ಕಡೆಗಳಲ್ಲಿ ನಡೆದ ಬಾಂಬ್ ಸ್ಪೋಟದ ಪ್ರಮುಖ ರೂವಾರಿ ಸಾಧ್ವಿ ಪ್ರಜ್ಣಾ ಸಿಂಗ್ ಠಾಕೂರ್ ನಿರೂಪಿಸಿದ್ದಾರೆ ಎಂದು ಮೌಲಾನ ಶಾಫಿ ಸಅದಿ ಅಭಿಪ್ರಾಯಪಟ್ಟರು.

ದೇಶದ ಭದ್ರತೆಗೆ ಬುರ್ಖಾ ನಿಷೇಧ ಆಗಬೇಕೆಂದು ಹೇಳಿದ ಪ್ರಜ್ಞಾಸಿಂಗ್ ರ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಎಂದು‌ ಬಣ್ಣಿಸಿದ ಅವರು ದೇಶದ ಭದ್ರತೆ ಹಾಗೂ ಅಖಂಡತೆಗೆ ನಿಮ್ಮಂತವರು ಮಾರಕ ಎಂದು ತಿರುಗೇಟು ನೀಡಿದರು.
ಕಾರ್ಯಕ್ರಮದಲ್ಲಿ ಅಮೀರೆ ಮಿಲ್ಲತ್ ಮುಫ್ತಿ ಶಾಕಿರ್ ಅಲಿ ನೂರಿ ಸಾಹೇಬ್ ಮುಖ್ಯ ಪ್ರಭಾಷಣ ನಡೆಸಿದರು.

error: Content is protected !! Not allowed copy content from janadhvani.com