ಮುಂಬೈ: ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿ ನಕ್ಸಲರು ಐಇಡಿ (ಸುಧಾರಿತ ಸ್ಫೋಟಕ ಸಾಧನ) ಸ್ಫೋಟಿಸಿದ್ದು, ಗಡ್‌ಚಿರೋಲಿ ಪೊಲೀಸ್ ಪಡೆಯ ನಕ್ಸಲ್ ನಿಗ್ರಹ ತಂಡದ 15 ಯೋಧರು ಮತ್ತು ಓರ್ವ ಚಾಲಕ ಈ ಸ್ಫೋಟದಲ್ಲಿ ಸಾವಿಗೀಡಾಗಿದ್ದಾರೆ.
ಈ ದಾಳಿಯಲ್ಲಿ ಹಲವಾರು ಯೋಧರಿಗೆ ಗಾಯಗಳಾಗಿವೆ. ಏಪ್ರಿಲ್ 22 ರಂದು ಭರಂಗಡ್ ಜಿಲ್ಲೆಯ ಬಳಿ ಭದ್ರತಾ ಸಿಬ್ಬಂದಿಗಳು 40 ನಕ್ಸಲರನ್ನು ಹತ್ಯೆ ಮಾಡಿದ್ದರು. ಅದರ ಪ್ರತೀಕಾರವಾಗಿ ಗಡ್‌ಚಿರೋಲಿಯಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಬುಧವಾರ ಮಧ್ಯಾಹ್ನ ಗಡ್‌ಚಿರೋಲಿ ಜಿಲ್ಲೆಯ ದಾದಾಪುರ್ ರಸ್ತೆಯಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಸಿ-60 ತಂಡದ 15 ಯೋಧರು ಹುತಾತ್ಮರಾಗಿದ್ದಾರೆ.ದಾದಾಪುರ್‌ನಿಂದ ಕೊರ್ಚಿ ರಸ್ತೆ ಕಡೆಗೆ ಭದ್ರತಾ ಸಿಬ್ಬಂದಿಗಳ ವಾಹನ ಸಾಗುತ್ತಿದ್ದಾಗ ನಕ್ಸಲರು ಐಇಡಿ ಸ್ಫೋಟಿಸಿದ್ದಾರೆ.
ಟ್ರಕ್ನಲ್ಲಿ ಸಾಗುತ್ತಿದ್ದ ಸಿ-60 ಕಮಾಂಡೋ ತಂಡವು ಅತ್ಯಂತ ಕಠಿಣ ನಕ್ಸಲ್ ನಿಗ್ರಹ ತರಬೇತಿ ಪಡೆದಿತ್ತು. ನಕ್ಸಲರ ವಿರುದ್ಧ ಹೋರಾಡಲು ಬೇಕಾದ ಗೆರಿಲ್ಲಾ ಮೊದಲಾದ ಆಕ್ರಮಣ ತಂತ್ರಗಳನ್ನ ಕರಗತ ಮಾಡಿಕೊಂಡಿತ್ತು. ಕಳೆದ ವರ್ಷ ಇದೇ ತಂಡವು ಗಡಚಿರೋಲಿಯಲ್ಲೇ 40 ಮಾವೋವಾದಿ ಉಗ್ರರನ್ನು ಎನ್ಕೌಂಟರ್ ಮಾಡಿ ಹತ್ಯೆಗೈದಿತ್ತು. ಆ ಹತ್ಯೆಗೆ ನಕ್ಸಲರು ಇವತ್ತು ಕಾರ್ಮಿಕರ ದಿನದಂದು ಸೇಡು ತೀರಿಸಿಕೊಂಡಿದ್ದಾರೆ. 2018ರ ಏಪ್ರಿಲ್ 22ರಂದು 40 ನಕ್ಸಲರ ಸಂಹಾರವಾಗಿತ್ತು. ಆ ದುರಂತಕ್ಕೆ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಮಾವೋವಾದಿಗಳು ಈ ವಾರ ಪೂರ್ತಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಈ ಪ್ರತಿಭಟನೆಯ ಭಾಗವಾಗಿ ಇವತ್ತು ಹಲವು ವಾಹನಗಳನ್ನ ಸುಟ್ಟು ಹಾಕಿದ್ದಾರೆ. ಹಾಗೂ ಕಮಾಂಡೋಗಳಿದ್ದ ಟ್ರಕ್ಕನ್ನು ಸ್ಫೋಟಿಸಿದ್ದಾರೆನ್ನಲಾಗಿದೆ.