janadhvani

Kannada Online News Paper

ಲೋಕಸಮರ: ನಾಳೆ 4ನೇ ಹಂತದ ಮತದಾನಕ್ಕೆ ವೇದಿಕೆ ಸಿದ್ಧ

ನವದೆಹಲಿ, ಏ.28:- ಪ್ರಜಾಸತ್ತೆಯ ಮಹಾ ಹಬ್ಬದಲ್ಲಿ ನಾಳೆ 4ನೇ ಹಂತದ ಮತದಾನಕ್ಕೆ ವೇದಿಕೆ ಸಿದ್ಧಗೊಂಡಿದೆ. 71 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದ್ದು 945 ಅಭ್ಯರ್ಥಿಗಳ ಹಣೆಬರಹವನ್ನು 12.79 ಕೋಟಿ ಮತದಾರರು ನಿರ್ಧರಿಸಲಿದ್ದಾರೆ.

ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ವ್ಯಾಪಕ ಬಂದೋಬಸ್ತ್ ಕೈಗೊಂಡಿದೆ. ಮಹಾರಾಷ್ಟ್ರದ 17, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 13, ಪಶ್ಚಿಮ ಬಂಗಾಳದಲ್ಲಿ 8, ಮಧ್ಯ ಪ್ರದೇಶ ಮತ್ತು ಓಡಿಶಾ ದಲ್ಲಿ 6, ಬಿಹಾರದ 5, ಜಾರ್ಖಂಡ್ 3, ಜಮ್ಮು-ಕಾಶ್ಮೀರದ ಅನಂತನಾಗ್ ಲೋಕಸಭಾ ಕ್ಷೇತ್ರಕ್ಕೂ ನಾಳೆ ಮತದಾನ ನಡೆಯುತ್ತಿದೆ.

ಬಿಜೆಪಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ತಂತ್ರಗಾರಿಕೆ ರೂಪಿಸಿದ್ದು, ಮುಂದಿನ ಹಂತಗಳಲ್ಲಿ ನಡೆಯಲಿರುವ ಚುನಾವಣೆ ಬಿಜೆಪಿ ಪಾಲಿಗೆ ಅತ್ಯಂತ ನಿರ್ಣಾಯಕವಾಗಲಿದೆ.
ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಬಿಜೆಪಿ ಕಣ್ಣಿಟ್ಟಿದ್ದು ವ್ಯಾಪಕ ಪ್ರಚಾರ ಕೈಗೊಂಡಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಹಿಂದಿ ಮಾತನಾಡುವ ರಾಜ್ಯಗಳ 71 ಕ್ಷೇತ್ರಗಳ ಪೈಕಿ 45 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು.

ಆದರೆ ಈ ಬಾರಿ ಉತ್ತರ ಪ್ರದೇಶದಲ್ಲಿ ಸಮಾಜ ವಾದಿ ಮತ್ತು ಬಹುಜನ ಸಮಾಜ ಪಕ್ಷ ಮೈತ್ರಿಮಾಡಿಕೊಂಡಿರುವುದರಿಂದ ಬಿಜೆಪಿಗೆ ಕಠಿಣ ಸವಾಲು ಎದುರಾಗಿದೆ. ಜಾರ್ಖಂಡ್‌ನಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ. ರಾಜಸ್ಥಾನ ಮತ್ತು ಮಧ್ಯ ಪ್ರದೇಶದಲ್ಲೂ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಿರುವುದರಿಂದ ಬಿಜೆಪಿಗೆ ಸಂಕಷ್ಟ ಎದುರಾಗಿದೆ. ಹೀಗಾಗಿ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ನರೇಂದ್ರ ಮೋದಿ ವರ್ಚಸ್ಸು ಹೇಗೆ ಮೊಡಿ ಮಾಡಲಿದೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಮಹಾರಾಷ್ಟ್ರದಲ್ಲಿ 6 ಲೋಕಸಭಾ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯುತ್ತಿದ್ದು, ಇಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿವೆ. ಈ ಮೈತ್ರಿ ಕೂಟಕ್ಕೆ ಎನ್.ಸಿ.ಪಿ. ಮತ್ತು ಕಾಂಗ್ರೆಸ್ ಕೂಡ ಪ್ರಬಲ ಪೈಪೋಟಿ ನೀಡಿದೆ.

error: Content is protected !! Not allowed copy content from janadhvani.com