ಮುಂಬೈ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ಪ್ರಧಾನಿ ಅಭ್ಯರ್ಥಿಗೆ ವಿರೋಧಿ ಮುಖ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅಥವಾ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಅವರು ಪ್ರಧಾನಿ ಹುದ್ದೆಗೆ ಉತ್ತಮ ಸ್ಪರ್ಧಿಗಳಾಗಿದ್ದಾರೆ ಎಂದು ಹಿರಿಯ ಅನುಭವಿ ರಾಜಕಾರಣಿ ಶರದ್ ಪವಾರ್ ಹೇಳಿದ್ದಾರೆ.
“ಮಮತಾ, ಮಾಯಾ ಅಥವಾ ನಾಯ್ಡು ಅವರು ಎನ್‍ಡಿಎ ಅಲ್ಲದ ಪಕ್ಷಗಳ ಅಭ್ಯರ್ಥಿಗೆ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ರಾಹುಲ್ ಗಾಂಧಿಗಿಂತ ಉತ್ತಮ ಆಯ್ಕೆ” ಎಂದು ಪವಾರ್ ಪ್ರಮುಖ ದೃಶ್ಯ ಮಾಧ್ಯಮದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
“ಎನ್‍ಡಿಎ ಅಲ್ಲದ ಯಾವುದಾದರೂ ಬೃಹತ್ ಮೈತ್ರಿ ಇನ್ನೂ ಅಸ್ತಿತ್ವದಲ್ಲಿದೆಯೇ?” ಎಂದು ಪ್ರಶ್ನಿಸಿದ ಪವಾರ್, “ರಾಹುಲ್ ಪ್ರಧಾನಿಯಾಗುವ ಬಗೆಗಿನ ಎಲ್ಲ ಮಾತುಕತೆಗಳು ಆಧಾರ ರಹಿತವಾಗಿದೆ” ಎಂದು ಹೇಳಿದ್ದಾರೆ.
“ಮಾಯಾವತಿ ಈಗಾಗಲೇ ತಾವು ಪ್ರಧಾನ ಮಂತ್ರಿಯ ಮಹತ್ವಾಕಾಂಕ್ಷಿ ಎಂದು ಸುಳಿವು ನೀಡಿದ್ದರೂ, ಬಿಜೆಪಿಯನ್ನು ಸೋಲಿಸುವುದು ಮಮತಾ ಮತ್ತು ನಾಯ್ಡು ಅವರ ಪ್ರಮುಖ ಗುರಿಯಾಗಿದೆ, ಆದರೆ PM ಸ್ಥಾನವಲ್ಲ” ಎಂದಿದ್ದಾರೆ.
ಪ್ರಧಾನಿ ಸ್ಪರ್ಧೆಯಿಂದ ಹೊರಗುಳಿದಿರುವ ಪವಾರ್, ಮತದಾನದ ನಂತರ ಕಿಂಗ್ ಮೇಕರ್ ಆಗಿ ಹೊರಹೊಮ್ಮುವ ಸಾಧ್ಯತೆಯಿದೆ. ಜೊತೆಗೆ ಚುನಾವಣೆಯ ಬಳಿಕ ಎನ್‍ಡಿಎ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆಯೂ ಎನ್ಸಿಪಿ ಮುಖ್ಯಸ್ಥರು ಸುಳಿವು ನೀಡಿದ್ದಾರೆ.
2004ರ ಲೋಕಸಭಾ ಚುನಾವಣೆಯ ಸಂದರ್ಭವನ್ನು ಪ್ರಸ್ತಾಪಿಸಿದ ಪವಾರ್, “ಎನ್‍ಡಿಎಯಿಂದ ನಾವು ಕೆಲವು ಪಕ್ಷಗಳನ್ನು ನಮ್ಮ ಮೈತ್ರಿಗೆ ಸೆಳೆಯಬಲ್ಲೆವು. 2004 ರಲ್ಲಿ, ನಾವೆಲ್ಲರೂ ಯುನಿಟೆಡ್ ಫ್ರಂಟ್ ಇಲ್ಲದೆ ಪ್ರತ್ಯೇಕವಾಗಿ ಹೋರಾಡಿದ್ದೆವು. ಚುನಾವಣೆಯ ನಂತರ, ನಾವು ಮೈತ್ರಿ ಮಾಡಿಕೊಂಡೆವು. ಸೋನಿಯಾಜಿ ನಿವಾಸದಲ್ಲಿ, ಮನಮೋಹನ್ ಜೀ, ಪ್ರಣಬ್ ಜೀ ಮತ್ತು ನಾನು ಈ ವಿಚಾರವನ್ನು ಚರ್ಚಿಸಿ ಬಳಿಕ ಬಿಜೆಪಿ ಜೊತೆ ಮೈತ್ರಿ ಹೊಂದಿಲ್ಲದ ಪಕ್ಷಗಳ ಬೆಂಬಲ ಪಡೆಯಲು ನಿರ್ಧರಿಸಿದೆವು. ಹತ್ತು ವರ್ಷಗಳ ಕಾಲ ದೇಶಕ್ಕೆ ಪರ್ಯಾಯ ಸ್ಥಿರ ಸರ್ಕಾರವನ್ನು ನಾವು ಒದಗಿಸಿದ್ದೇವೆ. ಆ ಸತ್ಯವನ್ನು ನೀವು ನಿರ್ಲಕ್ಷಿಸಬಾರದು” ಎಂದರು
ನಮ್ಮ ದೇಶದಲ್ಲಿ ಉತ್ತಮ ನಾಯಕರ ಕೊರತೆಯಿಲ್ಲ ಎಂದ ಪವಾರ್, “ಲೋಕಸಭಾ ಚುನಾವಣೆಯ ಫಲಿತಾಂಶಗಳು ಹೊರಬಂದ ಬಳಿಕ ಯಾರನ್ನು ಆಯ್ಕೆ ಮಾಡುವುದು ಎಂದು ನಿರ್ಧರಿಸುತ್ತೇವೆ. ನಮಲ್ಲಿ ಅನೇಕ ಸಮರ್ಥ ಮುಖಂಡರಿದ್ದಾರೆ. ಆದರೆ ಅವರನ್ನು ಹೆಸರಿಸಲು ಇದು ಸೂಕ್ತ ಸಮಯವಲ್ಲ” ಎಂದರು.