ನವದೆಹಲಿ: ಉತ್ತರಪ್ರದೇಶದ ಆಮೇಥಿಯಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಲ್ಲಿಸಿದ್ದ ನಾಮಪತ್ರವನ್ನು ಅಮಾನ್ಯ ಮಾಡುವಂತೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸೋಮವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ವಜಾಗೊಳಿಸಿದೆ. ಕೋರ್ಟ್ ಆದೇಶದ ನಂತರ ಚುನಾವಣಾ ಆಯೋಗ ರಾಹುಲ್ ಗಾಂಧಿ ಅವರ ನಾಮಪತ್ರವನ್ನು ಮಾನ್ಯ ಮಾಡಿದೆ.
ರಾಹುಲ್ ಗಾಂಧಿ ಸಲ್ಲಿಸಿರುವ ಅಫಿಡವಿಟ್ನಲ್ಲಿ ದೇಶದ ಪೌರತ್ವ ಹಾಗೂ ಶಿಕ್ಷಣ ಬಗ್ಗೆ ನೀಡಿರುವ ಮಾಹಿತಿ ವಿರೋಧಾಬಾಸದಿಂದ ಕೂಡಿವೆ. ರಾಹುಲ್ ಎರಡು ದೇಶಗಳ ನಾಗರಿಕತ್ವ ಹೊಂದಿದ್ದಾರೆ. ಹೀಗಾಗಿ ಇವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಸ್ವತಂತ್ರ ಅಭ್ಯರ್ಥಿ ಧ್ರುವ ರಾಜ್ ಶನಿವಾರ ದೂರು ಸಲ್ಲಿಸಿದ್ದರು.
ಇಂದು ರಾಹುಲ್ ಗಾಂಧಿ ಪರ ಕೋರ್ಟ್ಗೆ ಹಾಜರಾದ ವಕೀಲ ಕೆ.ಸಿ.ಕೌಶಿಕ್, ರಾಹುಲ್ ಗಾಂಧಿ ಭಾರತದಲ್ಲೇ ಹುಟ್ಟಿದವರು. ಭಾರತದ ಪಾಸ್ಪೋರ್ಟ್ ಹೊಂದಿದ್ದಾರೆ. ಅವರು ಯಾವುದೇ ದೇಶದ ನಾಗರಿಕತ್ವ ಹೊಂದಿಲ್ಲ. ಅವರ ಪಾಸ್ಪೋರ್ಟ್, ಮತದಾರ ಚೀಟಿ, ಆದಾಯ ತೆರಿಗೆ ಎಲ್ಲವೂ ಇರುವುದು ಭಾರತದಲ್ಲೇ. 1995ರಲ್ಲಿ ರಾಹುಲ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪದವಿ ಪಡೆದಿದ್ದಾರೆ. ಅದರ ದಾಖಲೆ, ಪ್ರಮಾಣಪತ್ರಗಳನ್ನು ಸಲ್ಲಿಸಿದ್ದೇವೆ ಎಂದು ಹೇಳಿದರು.