janadhvani

Kannada Online News Paper

ಹುತಾತ್ಮ ಪೊಲೀಸ್‌ ಅಧಿಕಾರಿ ಕರ್ಕರೆ ವಿರುದ್ಧ ಹೇಳಿಕೆ- ಸಾದ್ವಿಗೆ ನೋಟೀಸ್

ಮುಂಬೈ: ಮುಂಬೈನ 26/11ರ ಭಯೋತ್ಪಾದಕ ದಾಳಿಯ ವೇಳೆ ಹುತಾತ್ಮರಾಗಿದ್ದ ವೀರ ಪೊಲೀಸ್‌ ಅಧಿಕಾರಿ ಹೇಮಂತ್ ಕರ್ಕರೆ ಬಗ್ಗೆ ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿ, ಬೋಪಾಲ್‌ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾದ್ವಿ ಪ್ರಜ್ಞಾ ಸಿಂಗ್‌ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಚುನಾವಣೆ ಆಯೋಗವು ಶನಿವಾರ ನೋಟಿಸ್‌ ಜಾರಿ ಮಾಡಿದ್ದು, ಹೇಳಿಕೆ ಬಗ್ಗೆ ಸ್ಪಷ್ಟನೆ ಕೇಳಿದೆ.

ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ದಿಗ್ವಿಜಯ್‌ ಸಿಂಗ್‌ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿರುವ ಪ್ರಜ್ಞಾ ಸಿಂಗ್‌,  ಗುರುವಾರ ಪಕ್ಷದ ಕಾರ್ಯಕ್ರಮವೊಂದರ ಭಾಷಣದಲ್ಲಿ ಮಾತನಾಡುತ್ತಾ, ‘ಪೊಲೀಸ್‌ ಅಧಿಕಾರಿ ಹೇಮಂತ್‌ ಕರ್ಕರೆ ಅವರು ಸತ್ತಿದ್ದು ನನ್ನ ಶಾಪದಿಂದ,’ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಚುನಾವಣಾ ಆಯೋಗ ಗ್ರಹಿಸಿಕೊಂಡಿದೆ. ವಿವರಣೆ ನೀಡುವಂತೆ ಪ್ರಜ್ಞಾ ಸಿಂಗ್‌ ಅವರಿಗೆ ಬೋಪಾಲ್‌ ಜಿಲ್ಲಾ ಚುನಾವಣಾ ಅಧಿಕಾರಿ ನೋಟಿಸ್‌ ಜಾರಿ ಮಾಡಿದ್ದಾರೆ.

2008ರ ನವೆಂಬರ್‌ 26ರಂದು ಮುಂಬೈಯಲ್ಲಿ ನಡೆದ ಭಯೋತ್ಪಾದನಾ ದಾಳಿ ವೇಳೆ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್‌ ಕರ್ಕರೆ ಹುತಾತ್ಮರಾಗಿದ್ದರು.

ಭೋಪಾಲ್‍‌ದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದ ಪ್ರಜ್ಞಾ, ಮಾಲೇಗಾಂವ್ ಪ್ರಕರಣದಲ್ಲಿ ಬಂಧಿಯಾಗಿದ್ದ ತನಗೆ ಜೈಲಿನಲ್ಲಿ ಅಧಿಕಾರಿಗಳು ಯಾವ ರೀತಿ ಕಿರುಕುಳಕೊಟ್ಟಿದ್ದರು ಎಂದು ಹೇಳಿ ಕಣ್ಣೀರಿಟ್ಟಿದ್ದರು.

ಇದಾದ ನಂತರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ವಿರುದ್ಧ ಪ್ರಗ್ಯಾ ವಾಗ್ದಾಳಿ ನಡೆಸಿದ್ದಾರೆ. ಕರ್ಕರೆ ತನಗೆ ಸಿಕ್ಕಾಪಟ್ಟೆ ಕಿರುಕುಳ ನೀಡಿದ್ದರು. ಅವರು ಪದೇ ಪದೇ ನನ್ನನ್ನು ವಿಚಾರಣೆಗೊಳಪಡಿಸಿ ತೊಂದರೆ ನೀಡುತ್ತಿದ್ದರು. ನಾನು ನಿರಪರಾಧಿಯಾದ ಕಾರಣ ಅವರ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರವಿರುತ್ತಿರಲಿಲ್ಲ.

 ಜೈಲಿನಲ್ಲಿರುವಾಗ ಕರ್ಕರೆ ತನಗೆ ನೀಡಿದ ಕಿರುಕುಳ, ಬೆದರಿಕೆಗೆ ನಾನು ಅವರನ್ನು ಶಪಿಸಿದೆ. ನೀನು ಸರ್ವ ನಾಶ ಆಗುತ್ತೀಯಾ ಎಂದು ನಾನು ಶಪಿಸಿದ್ದೆ. ನಾನು ಜೈಲಿಗೆ ಕಾಲಿಟ್ಟ ಅದೇ ದಿನ ಉಗ್ರರಿಂದ ಕರ್ಕರೆ ಹತರಾದರು.ನನ್ನನ್ನು ಬಂಧಿಸಿದ ದಿನವೇ ಹೇಮಂತ್ ಕರ್ಕರೆಯ ಅಶುಭ ದಿನಗಳು ಆರಂಭವಾಗಿದ್ದವು. ಸರಿಯಾಗಿ 45 ದಿನಗಳ ನಂತರ ಅವರು ಸತ್ತರು. ಅಲ್ಲಿಗೆ ಆ ಅಶುಭ ದಿನಗಳ ಮುಗಿದವು  ಎಂದು ಪ್ರಗ್ಯಾ ಹೇಳಿದ್ದಾರೆ.

error: Content is protected !! Not allowed copy content from janadhvani.com