ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತ ಆನ್‌ಲೈನ್ ಸೀರಿಸ್ “ಮೋದಿ: ಜರ್ನಿ ಆಫ್ ಎ ಕಾಮನ್ ಮ್ಯಾನ್” ಅನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ಚುನಾವಣಾ ಆಯೋಗ ‘ಎರೋಸ್ ನೌ’ ಡಿಜಿಟಲ್ ಮಾಧ್ಯಮಕ್ಕೆ ಆದೇಶಿಸಿದೆ.
ಮೋದಿ ಅವರ ಜೀವನ ಚರಿತ್ರೆ ಕುರಿತ ಚಿತ್ರವನ್ನು ಚುನಾವಣೆ ಮುಗಿಯವರೆಗೆ ಪ್ರದರ್ಶನ ಮಾಡುವಂತಿಲ್ಲ ಎಂಬ ಏ.10ರ ತನ್ನ ಆದೇಶವನ್ನೇ ಉಲ್ಲೇಖಿಸಿ ‘ಎರೋಸ್ ನೌ’ ಡಿಜಿಟಲ್ ಮಾಧ್ಯಮಕ್ಕೆ ಇಂದು ಚುನಾವಣೆ ಆಯೋಗ ಸೂಚನೆ ನೀಡಿದೆ. ನಿಮ್ಮ ಡಿಜಿಟಲ್ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ‘ಮೋದಿ: ಜರ್ನಿ ಆಫ್ ಎ ಕಾಮನ್ ಮ್ಯಾನ್’ ಎಂಬ ಆನ್‌ಲೈನ್ ಸೀರಿಸ್ ಅನ್ನು ನಿಲ್ಲಿಸಬೇಕು. ಇದರ 5 ಸಂಚಿಕೆ ನಿಮ್ಮ ಡಿಜಿಟಲ್ ವೇದಿಕೆಯಲ್ಲಿ ಲಭ್ಯವಿದೆ. ಅವುಗಳನ್ನೆಲ್ಲ ತೆಗೆದು ಹಾಕಬೇಕು,’ ಎಂದು ಆಯೋಗ ಹೇಳಿದೆ.
‘ಈ ವೆಬ್ ಸೀರಿಸ್ ಸದ್ಯ ದೇಶದ ಪ್ರಧಾನಿಯಾಗಿರುವ, ಪಕ್ಷವೊಂದರ ನಾಯಕರಾಗಿರುವ, ಚುನಾವಣೆಯಲ್ಲಿ ಸ್ವತಃ ಅಭ್ಯರ್ಥಿಯೂ ಆಗಿರುವ ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದ್ದಾಗಿದೆ ಎಂಬುದು ದಾಖಲೆಗಳನ್ನು ಪರಿಶೀಲಿಸಿದ ನಂತರ ಗೊತ್ತಾಗಿದಿದೆ. ಹೀಗಾಗಿ ಸೀರಸ್‌ನ ಪ್ರದರ್ಶನವನ್ನು ನಿಲ್ಲಿಸಬೇಕು,’ ಎಂದೂ ಚುನಾವಣೆ ಆಯೋಗದ ಸಮಿತಿ ಹೇಳಿದೆ.