ಬೆಂಗಳೂರು (ಏ.17): ಎರಡನೇ ಹಂತದ ಚುನಾವಣೆಗೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಕರ್ನಾಟಕದ 14 ಕ್ಷೇತ್ರಗಳು ಸೇರಿ ದೇಶದ 97 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಅತ್ಯಂತ ಕುತೂಹಲ ಮೂಡಿಸಿರುವ ಮಂಡ್ಯದಲ್ಲೂ ಕೂಡ ನಾಳೆ ಮತದಾರರು ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಮಾಡಲಿದ್ದಾರೆ.
ರಾಜ್ಯದಲ್ಲಿ ನಾಳೆ ನಡೆಯುವ 14 ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲ ಮೂಡಿಸಿರುವುದು ಮಂಡ್ಯ ಲೋಕಸಭೆ ಕ್ಷೇತ್ರ. ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಎಚ್ಡಿ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ. ನಿಖಿಲ್ ವಿರುದ್ಧ ಅಂಬರೀಶ್ ಪತ್ನಿ ಸುಮಲತಾ ಕಣದಲ್ಲಿದ್ದಾರೆ. ಇಬ್ಬರ ನಡುವೆ ನೇರ ಹಣಾಹಣಿ ಎರ್ಪಟ್ಟಿದೆ. ಸುಮಲತಾ ಪರ ನಟ ಯಶ್ ಹಾಗೂ ದರ್ಶನ್ ಅಬ್ಬರದ ಪ್ರಚಾರ ನಡೆಸಿದ್ದಾರೆ. ಗೌಡರ ಕುಟುಂಬ ನಿಖಿಲ್ ಪರವಾಗಿ ಭಾರೀ ಪ್ರಚಾರ ನಡೆಸಿದೆ. ಬಂಡಾಯ ಎದ್ದಿರುವ ಕಾಂಗ್ರೆಸ್ ಕಾರ್ಯಕರ್ತರು ಸುಮಲತಾ ಪರ ಪ್ರಚಾರ ನಡೆಸುತ್ತಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ನಿಂದ ಮಿಥುನ್ ರೈ ಬಿಜೆಪಿಯಿಂದ ಸಂಸದ ನಳಿನ್ ಕುಮಾರ್ ಕಟೀಲ್, ಎಸ್ಡಿಪಿಐ ಯಿಂದ ಇಲ್ಯಾಸ್ ತುಂಬೆ ಕಣದಲ್ಲಿದ್ದಾರೆ. ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ಬಿಜೆಪಿ ಪಕ್ಷವನ್ನು ಪ್ರತಿನಿಧಿಸಿದರೆ, ಪ್ರಮೋದ್ ಮದ್ವರಾಜ್ ಕಾಂಗ್ರೆಸ್ ಪ್ರತಿನಿಧಿಸುತ್ತಿದ್ದಾರೆ. ಚಿತ್ರದುರ್ಗದಲ್ಲಿ ಕಾಂಗ್ರೆಸ್ನಿಂದ ಬಿ.ಎನ್ ಚಂದ್ರಪ್ಪ, ಬಿಜೆಪಿ ಎ.ನಾರಾಯಣಸ್ವಾಮಿ ಕಣದಲ್ಲಿದ್ದಾರೆ.
ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿಸೂರ್ಯ ಹಾಗೂ ಮೈತ್ರಿ ಅಭ್ಯರ್ಥಿ ಬಿಕೆ ಹರಿಪ್ರಸಾದ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿಯಿಂದ ಅಶ್ವತ್ಥನಾರಾಯಣ ಹಾಗೂ ಕಾಂಗ್ರೆಸ್ನಿಂದ ಡಿಕೆ ಸುರೇಶ್ ಕಣದಲ್ಲಿದ್ದಾರೆ. ಬೆಂಗಳೂರು ಉತ್ತರದಿಂದ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಹಾಗೂ ಕಾಂಗ್ರೆಸ್ನಿಂದ ಕೃಷ್ಣಭೈರೇ ಗೌಡ ಸ್ಪರ್ಧೆಗೆ ಇಳಿದಿದ್ದಾರೆ. ಬೆಂಗಳೂರು ಕೇಂದ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಿಜ್ವಾನ್ಅರ್ಷದ್ ಹಾಗೂ ಬಿಜಪಿ ಅಭ್ಯರ್ಥಿಯಾಗಿ ಪಿಸಿ ಮೋಹನ್ ಕಣದಲ್ಲಿದ್ದಾರೆ. ಪ್ರಕಾಶ್ ರಾಜ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
ತುಮಕೂರಿನಲ್ಲಿ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಜಿಎಸ್ ಬಸವರಾಜು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಹಾಸನ ಚುನಾವಣಾ ಕಣ ಕೂಡ ತುಂಬಾನೇ ಕುತೂಹಲ ಮೂಡಿಸಿದೆ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಇಲ್ಲಿಂದ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಎ. ಮಂಜು ಪ್ರಜ್ವಲ್ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ.
ಮೈಸೂರಿನಲ್ಲಿ ಪ್ರತಾಪ್ ಸಿಂಹ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿಎಚ್ ವಿಜಯ್ಶಂಕರ್ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ. ಚಾಮರಾಜನಗರದಲ್ಲಿ ಧ್ರುವ ನಾರಾಯಣ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ, ಬಿಜೆಪಿಯಿಂದ ಶ್ರೀನಿವಾಸ್ ಪ್ರಸಾದ್ ಕಣದಲ್ಲಿದ್ದಾರೆ.
ಕೋಲಾರದಲ್ಲಿ ಕಾಂಗ್ರೆಸ್ನ ಕೆಎಚ್ ಮುನಿಯಪ್ಪ ಹಾಗೂ ಬಿಜೆಪಿಯ ಎಸ್. ಮುನಿಸ್ವಾಮಿ ನಡುವೆ ಹಣಾಹಣಿ ಏರ್ಪಟ್ಟಿದೆ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ನಿಂದ ವೀರಪ್ಪ ಮೊಯ್ಲಿ, ಬಿಜೆಪಿಯಿಂದ ಎನ್. ಬಚ್ಚೇಗೌಡ ಸ್ಪರ್ಧೆಯಲ್ಲಿದ್ದಾರೆ.
ರಾಜ್ಯದಲ್ಲಿ ನಾಳೆ ನಡೆಯಲಿರುವ ಮತದಾನದ ಪೈಕಿ ಮಂಡ್ಯ, ತುಮಕೂರು, ಕೋಲಾರ ಹಾಗೂ ಹಾಸನ ಕ್ಷೇತ್ರಗಳು ಇಡೀ ರಾಜ್ಯದ ಗಮನ ಸೆಳೆದಿವೆ. ಇದೇ ಕಾರಣಕ್ಕೆ ಈ ಕ್ಷೇತ್ರಗಳನ್ನು ಸೂಕ್ಷ್ಮ ವಲಯಗಳು ಎಂದು ಗುರುತಿಸಲಾಗಿದ್ದು ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.
2ನೇ ಹಂತದ ಮತದಾನದಲ್ಲಿ ಅಸ್ಸಾಂನ 5, ಬಿಹಾರದ 5, ಛತ್ತೀಸ್ಘಡದ 3, ಜಮ್ಮು-ಕಾಶ್ಮೀರದ 2, ಕರ್ನಾಟಕದ 14, ಮಹಾರಾಷ್ಟ್ರದ 10, ಮಣಿಪುರ್ನ 01, ಓದಿಶಾ 05, ತಮಿಳುನಾಡು 39, ತ್ರಿಪುರ 01, ಉತ್ತರಪ್ರದೇಶದ 08, ಪಶ್ಚಿಮ ಬಂಗಾಳದ 03 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.