janadhvani

Kannada Online News Paper

ಶೀಘ್ರ ಫಲಿತಾಂಶ ಮುಖ್ಯವಲ್ಲ: ವಿವಿ ಪ್ಯಾಟ್‍ ಎಣಿಸಿ-ಸುಪ್ರೀಂಕೋರ್ಟ್

ನವದೆಹಲಿ,ಏ.8- ಮತದಾರರಲ್ಲಿ ಭರವಸೆ ಮೂಡಿಸಲು ಮತ್ತು ಚುನಾವಣಾ ಪಾರದರ್ಶಕತೆಯನ್ನು ಸಾಬೀತುಪಡಿಸಲು ವಿವಿ ಪ್ಯಾಟ್ ಸ್ಲಿಪ್‍ಗಳನ್ನು ತಾಳೆ ಹಾಕುವ ಪ್ರಕ್ರಿಯೆಯನ್ನು ಚುರುಕುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಇಂದು ಸೂಚನೆ ನೀಡಿದೆ.

ಪ್ರತಿಯೊಂದು ಲೋಕಸಭಾ ಕ್ಷೇತ್ರದ ಒಂದು ವಿಧಾನಸಭಾ ಕ್ಷೇತ್ರದ 5 ಬೂತ್‍ಗಳನ್ನು ಆಯ್ಕೆ ಮಾಡಿಕೊಂಡು ವಿವಿ ಪ್ಯಾಟ್‍ನಲ್ಲಿ ಬರುವಂತಹ ಸ್ಲಿಪ್ ಅನ್ನು ತಾಳೆ ಹಾಕಿ ನೋಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್‍ನಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.

ಚುನಾವಣೆ ನಡೆದು ಫಲಿತಾಂಶ ಶೀಘ್ರ ಪ್ರಕಟಿಸುವುದು ಮುಖ್ಯವಲ್ಲ. ಜನರ ನಂಬಿಕೆ ಉಳಿಸಿಕೊಳ್ಳುವುದು ಅವಶ್ಯಕ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಟಿಡಿಪಿ ಸೇರಿದಂತೆ ಸುಮಾರು 21 ಪಕ್ಷಗಳು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿ ಶೇ.50ರಷ್ಟು ಇವಿಎಂಗಳಲ್ಲಿ ವಿವಿ ಪ್ಯಾಟ್‍ಗಳನ್ನು ಅಳವಡಿಸುವುದು ಮತ್ತು ಅದರ ಪರಿಶೀಲನೆ ನಡೆಸುವಂತೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದ್ದವು.

ಸುಪ್ರಿಂ ಆದೇಶ ಜಾರಿಗೆ-ಚುನಾವಣಾ ಆಯೋಗ

ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ಒಂದು ಕ್ಷೇತ್ರದಿಂದ ಒಂದು ಇವಿಎಂನಲ್ಲಿ ಒಂದು ವಿವಿಪ್ಯಾಟ್ ಬದಲಾಗಿ 5 ಇವಿಯಂಗಳಿಂದ ವಿವಿಪ್ಯಾಟ್ ರಶೀದಿಯನ್ನು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಜಾರಿಗೆ ತರಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.

“ಭಾರತದ ಚುನಾವಣಾ ಆಯೋಗವು ಗೌರವಾನ್ವಿತ ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಕಾರ್ಯಗತಗೊಳಿಸಲು ಮತ್ತು ಕಾರ್ಯರೂಪಕ್ಕೆ ತರಲು ಎಲ್ಲ ಪ್ರಯತ್ನಗಳನ್ನು ನಡೆಸಲಿದೆ” ಎಂದು ಚುನಾವಣಾ ಸಮಿತಿಯ ಅಧಿಕೃತ ವಕ್ತಾರರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com