janadhvani

Kannada Online News Paper

ಹಳೆ ಸಂಖ್ಯೆ ಬಳಸಿ ಮಹಿಳೆಯರ ವಾಟ್ಸಾಪ್ ಗುಂಪು ಸೇರಿದ ಅಪರಿಚಿತ ವ್ಯಕ್ತಿ- ಬ್ಲ್ಯಾಕ್ ಮೇಲ್

ಅಜ್ಮಾನ್: ವಾಟ್ಸ್ಆ್ಯಪ್ ಗುಂಪಿನ ಮೂಲಕ ಲಭಿಸಿದ ಚಿತ್ರಗಳನ್ನು ಎಡಿಟ್ ಮಾಡುವ ಮೂಲಕ ಮಹಿಳೆಯೊಬ್ಬರನ್ನು ಬ್ಲ್ಯಾಕ್ ಮೇಲ್ ಮಾಡಿರುವುದಕ್ಕೆ ಸಂಬಂಧಿಸಿದಂತೆ ಯುವಕರನೊಬ್ಬನನ್ನು ಬಂಧಿಸಲಾಗಿದೆ. ಅಜ್ಮಾನ್ ಪೊಲೀಸರು 23 ವರ್ಷದ ಏಷ್ಯನ್ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಮತ್ತೊಬ್ಬ ವ್ಯಕ್ತಿಯ ಹಳೆಯ ಸಂಖ್ಯೆಯನ್ನು ಬಳಸಿಕೊಂಡು ಆತ ಮಹಿಳಾ ವಾಟ್ಸ್ಆ್ಯಪ್ ಗುಂಪನ್ನು ಸೇರಿಕೊಂಡಿದ್ದ ಎನ್ನಲಾಗಿದ್ದು ಈ ಗುಂಪಿನ ಯಾವುದೇ ಸದಸ್ಯರು ಈ ಬಗ್ಗೆ ತಿಳಿದಿರಲಿಲ್ಲ.

20 ವರ್ಷ ವಯಸ್ಸಿನ ಯುವತಿ ಪೊಲೀಸರನ್ನು ಸಂಪರ್ಕಿಸಿದ್ದು, ಆತ ಕೇಳಿದ ಹಣವನ್ನು ಪಾವತಿಸದಿದ್ದಲ್ಲಿ ಸಾಮಾಜಿಕ ಮಾಧ್ಯಮಕ್ಕೆ ತನ್ನ ಕೆಟ್ಟ ಚಿತ್ರವನ್ನು ಹರಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರು ನೀಡಿದ್ದಾರೆ. ಯುವತಿ ಮತ್ತು ಅವರ ಮಿತ್ರರು ಇರುವ ಗುಂಪಿನಲ್ಲಿ ಆಕೆ ತನ್ನ ಚಿತ್ರಗಳನ್ನು ಹಂಚಿಕೊಂಡಿದ್ದರು,

ಗುಂಪಿನ ಸದಸ್ಯರೊಬ್ಬರು ತಮ್ಮ ಮೊಬೈಲ್ ಸಂಖ್ಯೆಯನ್ನು ಒಂದು ವರ್ಷದ ಹಿಂದೆ ಬದಲಿಸಿದ್ದು, ಆದರೆ ಆ ಸಂಖ್ಯೆಯನ್ನು ಗುಂಪಿನಿಂದ ಹೊರಗಿಟ್ಟಿರಲಿಲ್ಲ. ಆರೋಪಿಯು ಹೊಸ ಸಿಮ್ ಪಡೆದಾಗ ಅದೇ ಸಂಖ್ಯೆ ಆತನಿಗೆ ಲಭಿಸಿದ್ದವು. ಆತ ವಾಟ್ಸ್ಆ್ಯಪ್ ಅನ್ನು ಬಳಸಲಾರಂಭಿಸಿದಾಗ, ಗುಂಪಿನಿಂದ ಸಂದೇಶಗಳು ಮತ್ತು ಚಿತ್ರಗಳನ್ನು ಪಡೆಯಲಾರಂಭಿಸಿದನು.

ಯುವತಿಯ ಚಿತ್ರವನ್ನು ವ್ಯಕ್ತಿಯೊಬ್ಬನೊಂದಿಗೆ ಎಡಿಟ್ ಮಾಡಿ ಆತ ಬ್ಲಾಕ್‌ ಮೇಲ್ ಮಾಡಿದ್ದು, ಚಿತ್ರದಲ್ಲಿರುವ ವ್ಯಕ್ತಿಯ ಬಗ್ಗೆ ಆಕೆಗೆ ಮಾಹಿತಿಯಿಲ್ಲ ಎನ್ನಲಾಗಿದೆ. ಆತ ಬೆದರಿಕೆ ಹಾಕಿದ ಬಳಿಕ ಯುವತಿಯು ಪೊಲೀಸರನ್ನು ಭೇಟಿಯಾಗಿದ್ದು, ಅಲ್ ಹಾಮಿದಿಯಾ ಪೊಲೀಸ್ ಠಾಣಾ ನಿರ್ದೇಶಕರು ಆರೋಪಿಯನ್ನು ಬಂಧಿಸಿರುವುದಾಗಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದ ಮೂಲಕ ಇನ್ನೊಬ್ಬ ವ್ಯಕ್ತಿಯ ಗೌಪ್ಯತೆಯ ಮೇಲೆ ಯಾವುದೇ ರೀತಿಯ ಆಕ್ರಮಣವು ಅಪರಾಧವೆಂದು ಅವರು ಹೇಳಿದ್ದಾರೆ.

ತಮ್ಮ ವಾಟ್ಸಾಪ್ ಗ್ರೂಪ್ ನಲ್ಲಿರುವ ಸದಸ್ಯರು ಸಿಮ್ ಬದಲಾಯಿಸಿದ್ದಲ್ಲಿ, ಇಲ್ಲವೇ ಆಕ್ಟೀವ್ ಅಲ್ಲದ ಸಂಖ್ಯೆ ತಮ್ಮ ಗ್ರೂಪ್ ನಲ್ಲಿದ್ದಲ್ಲಿ ಅವುಗಳನ್ನು ಕೂಡಲೇ ರಿಮೂವ್ ಮಾಡುವುದರಿಂದ ಇಂತಹಾ ಅನಾಹುತಗಳಿಂದ ತಪ್ಪಿಸಬಹುದು.

error: Content is protected !! Not allowed copy content from janadhvani.com