janadhvani

Kannada Online News Paper

ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ, ಇನ್ನೊಂದು ಅವಕಾಶ ಕೊಡಿ- ಪ್ರಧಾನಿ ಮೋದಿ

ಪಾಟ್ನಾ,ಎ.2: ಕಳೆದ ಚುನಾವಣೆ ವೇಳೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ, ಇನ್ನೊಂದು ಅಧಿಕಾರಾವಧಿ ಅಗತ್ಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬಿಹಾರದ ಜಮುಯಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದರು.

‘‘ಎಲ್ಲ ಕಾರ್ಯಗಳನ್ನೂ ಪೂರ್ಣಗೊಳಿಸಿದ್ದೇನೆ ಎಂದು ನಾನು ಹೇಳುತ್ತಿಲ್ಲ. 70 ವರ್ಷಗಳಲ್ಲಿ ಹಾಗೆ ಹೇಳಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲದಿರುವಾಗ ಕೇವಲ ಐದು ವರ್ಷಗಳಲ್ಲಿ ಅದನ್ನು ನಾನು ಹೇಳಲು ಹೇಗೆ ಸಾಧ್ಯ? ಬಹಳಷ್ಟನ್ನು ಮಾಡಿದ್ದೇವೆ,ಇನ್ನೂ ಬಹಳಷ್ಟನ್ನು ಮಾಡುವ ಸಾಮರ್ಥ್ಯವಿದೆ ಮತ್ತು ಇದಕ್ಕಾಗಿ ನಿರಂತರ ಪ್ರಯತ್ನಗಳ ಅಗತ್ಯವಿದೆ. ಹೀಗಾಗಿ ನಿಮ್ಮ ಆಶೀರ್ವಾದ ಬೇಕು ’’ಎಂದು ಅವರು ಹೇಳಿದರು.

ಆರು ವರ್ಷಗಳ ಹಿಂದೆ ಪ್ರಧಾನಿ ಅಭ್ಯರ್ಥಿಯಾಗಿ ಉತ್ತರ ಪ್ರದೇಶದಲ್ಲಿ ಪ್ರಚಾರದ ಸಂದರ್ಭ ಮೋದಿ,‘‘ನೀವು ಕಾಂಗ್ರೆಸ್‌ಗೆ 60 ವರ್ಷಗಳನ್ನು ಕೊಟ್ಟಿದ್ದೀರಿ,ಬಿಜೆಪಿಗೆ ಕೇವಲ 60 ತಿಂಗಳುಗಳನ್ನು ಕೊಡಿ. ನಾವು 60 ತಿಂಗಳುಗಳಲ್ಲಿ ಭಾರತದ ಭವಿಷ್ಯವನ್ನು ಬದಲಿಸುತ್ತೇವೆ ಮತ್ತು ಅಭಿವೃದ್ಧಿಯನ್ನು ತರುತ್ತೇವೆ ’’ ಎಂದು ಆಗ್ರಹಿಸಿದ್ದರು.

ತನ್ನ ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ದಾಳಿ ನಡೆಸಿದ ಮೋದಿ,ಅದು ಮತ್ತು ಅದರ ಮಿತ್ರಪಕ್ಷಗಳು ಅಧಿಕಾರದಲ್ಲಿದ್ದಾಗ ಆಡಳಿತವು ಹಿಮ್ಮುಖವಾಗಿ ಸಾಗುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭಯೋತ್ಪಾದನೆ, ಬೆಲೆಗಳು,ಭ್ರಷ್ಟಾಚಾರ ಮತ್ತು ಕಪ್ಪುಹಣ ಹೆಚ್ಚುತ್ತವೆ ಹಾಗೂ ದೇಶದ ಸಮೃದ್ಧಿ,ಅದರ ವಿಶ್ವಾಸಾರ್ಹತೆ,ಸಶಸ್ತ್ರ ಪಡೆಗಳ ನೈತಿಕ ಸ್ಥೈರ್ಯ ಮತ್ತು ಪ್ರಾಮಾಣಿಕತೆಗೆ ಗೌರವ ಕಡಿಮೆಯಾಗುತ್ತದೆ ಎಂದರು.

ಕಾಂಗ್ರೆಸ್ ಮತ್ತು ನೆಹರು-ಗಾಂಧಿ ಕುಟುಂಬವು ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ‘ಪರಾಭವ’ಕ್ಕಾಗಿ ಪ್ರತಿಯೊಂದನ್ನೂ ಮಾಡಿತ್ತು ಎಂದು ಅವರು ಆರೋಪಿಸಿದರು. ಮೀಸಲು ಕ್ಷೇತ್ರವಾಗಿರುವ ಜಮುಯಿಯಲ್ಲಿ ಎ.11ರಂದು ಮತದಾನ ನಡೆಯಲಿದೆ.

error: Content is protected !! Not allowed copy content from janadhvani.com