janadhvani

Kannada Online News Paper

ಲೋಕಸಭೆ ಚುನಾವಣೆಯಲ್ಲಿ ಮಾಯಾವತಿ ಸ್ಪರ್ಧಿಸದಿರಲು ನಿರ್ಧಾರ

ಲಖನೌ: ಬಿಎಸ್‌ಪಿ ಮುಖ್ಯಸ್ಥೆ, ಉತ್ತರ ಪ್ರದೇಶ ರಾಜಕಾರಣಿ ಮಾಯಾವತಿ(63) ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಏಪ್ರಿಲ್‌ –ಮೇನಲ್ಲಿ ನಿಗದಿಯಾಗಿರುವ ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಅಭ್ಯರ್ಥಿಗಳ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳುವುದಾಗಿ ಹೇಳಿದ್ದಾರೆ.

’ಮುಂಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ನನ್ನ ನಿರ್ಧಾರವನ್ನು ನನ್ನ ಪಕ್ಷ ಅರ್ಥೈಸಿಕೊಳ್ಳುತ್ತದೆ ಎಂಬ ಭರವಸೆಯಿದೆ. ಸಮಾಜವಾದಿ ಪಕ್ಷದ ಜತೆಗಿನ ಮೈತ್ರಿ ಉತ್ತಮವಾಗಿದೆ. ಕ್ಷೇತ್ರವನ್ನು ಬಿಟ್ಟು, ಅಗತ್ಯವಾದರೆ ಮುಂದಿನ ದಿನಗಳಲ್ಲಿ ಸ್ಪರ್ಧಿಸುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಮಾಯಾವತಿ ಬುಧವಾರ ಹೇಳಿದ್ದಾರೆ.

ಬಹುಜನ ಸಮಾಜವಾದಿ ಪಾರ್ಟಿಯು ಲೋಕಸಭಾ ಚುನಾವಣೆಗಾಗಿ ವಿರೋಧ ಪಕ್ಷ ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಸಾಧಿಸಿದ್ದು, ಉತ್ತರ ಪ್ರದೇಶದಲ್ಲಿ ಬಿಜೆಪಿ ದೂಳೀಪಟ ಮಾಡಲು ಯೋಜನೆ ರೂಪಿಸಿದೆ.

ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಮಾಯಾವತಿ, 1994ರಲ್ಲಿ ಮೊದಲ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಅಖಿಲೇಶ್‌ ಯಾದವ್‌ ಮತ್ತು ಮಾಯಾವತಿ ಜತೆಯಾಗಿ ಕಾರ್ಯತಂತ್ರದೊಂದಿಗೆ ಜೋರು ಪ್ರಚಾರ ನಡೆಸುವ ಮೂಲಕ ಮೈತ್ರಿಗೆ ಅತಿ ಹೆಚ್ಚು ಸ್ಥಾನ ಗಳಿಸಲು ಕಂಕಣಬದ್ಧರಾಗಿದ್ದಾರೆ.

ದಲಿತ ನಾಯಕಿ ಮಾಯಾವತಿ ಅವರ ಬಿಎಸ್‌ಪಿ, 2014ರ ಚುನಾವಣೆಯಲ್ಲಿ ರಾಜ್ಯದ 80 ಸ್ಥಾನಗಳ ಪೈಕಿ ಕನಿಷ್ಠ ಒಂದು ಸ್ಥಾನವನ್ನು ಪಡೆಯಲೂ ಸಾಧ್ಯವಾಗಲಿಲ್ಲ. ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಶೇ 20ರಷ್ಟು ಮತಗಳನ್ನು ಗಳಿಸಿಕೊಂಡಿತ್ತು ಹಾಗೂ ಬಹುತೇಕ ಕ್ಷೇತ್ರಗಳಲ್ಲಿ ಮತಗಳಿಕೆಯಲ್ಲಿ ಮೂರನೇ ಸ್ಥಾನದಲ್ಲಿತ್ತು.

ಕಳೆದ ಉಪಚುನಾವಣೆಯಲ್ಲಿ ಬಿಎಸ್‌ಪಿ–ಎಸ್‌ಪಿ ಮೈತ್ರಿ ಗೆಲುವಿನ ನಗೆ ಬೀರಿತ್ತು. ಉತ್ತರ ಪ್ರದೇಶದಲ್ಲಿ ಬಿಜೆಪಿ ವಿರುದ್ಧ ಮತಗಳಿಕೆಗೆ ಕಾಂಗ್ರೆಸ್‌ ಪ್ರಿಯಾಂಕಾ ಗಾಂಧಿ ವಾದ್ರಾಗೆ ಜವಾಬ್ದಾರಿ ವಹಿಸಿದ್ದು, ಇದರಿಂದ ಮತಗಳಲ್ಲಿ ವಿಭಜನೆಯಾಗುವ ಸಾಧ್ಯತೆ ಹೆಚ್ಚಿದೆ

error: Content is protected !! Not allowed copy content from janadhvani.com