ನವದೆಹಲಿ: ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳು ಕಳವಾಗಿವೆ ಎಂದು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.
ರಹಸ್ಯ ದಾಖಲೆಗಳನ್ನು ಬಳಸಿಕೊಂಡು ಅರ್ಜಿದಾರರು ‘ಅಧಿಕೃತ ರಹಸ್ಯ ಕಾಯ್ದೆ’ಯನ್ನು ಉಲ್ಲಂಘಿಸುತ್ತಿದ್ದಾರೆ ಎಂದೂ ಸರ್ಕಾರ ಆರೋಪಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
‘ರಕ್ಷಣಾ ಇಲಾಖೆಯಿಂದ ಈ ದಾಖಲೆಗಳನ್ನು ಹಾಲಿ ಅಥವಾ ಮಾಜಿ ಉದ್ಯೋಗಿಗಳು ಕಳವು ಮಾಡಿರಬಹುದು. ಈ ದಾಖಲೆಗಳು ತುಂಬಾ ರಹಸ್ಯವಾಗಿರಬೇಕಾದವುಗಳಾಗಿದ್ದು ಸಾರ್ವಜನಿಕರಿಗೆ ಲಭ್ಯವಾಗಬಾರದು’ ಎಂದು ಅಟಾರ್ನಿ ಜನರಲ್ ಅವರು ಕೋರ್ಟ್‌ಗೆ ತಿಳಿಸಿದರು.
ಈ ವಿಚಾರವಾಗಿ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಪ್ರಶ್ನಿಸಿದರು. ಇದಕ್ಕುತ್ತರಿಸಿದ ಅಟಾರ್ನಿ ಜನರಲ್, ದಾಖಲೆಗಳು ಹೇಗೆ ಕಳವಾಗಿವೆ ಎಂಬ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದರು.
‘ರಹಸ್ಯ ದಾಖಲೆಗಳನ್ನು ಅರ್ಜಿಯ ಜತೆ ಸೇರಿಸಬಾರದು. ಇದು ಅಪರಾಧವಾಗುತ್ತದೆ. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಮರುಪರಿಶೀಲನಾ ಮತ್ತು ಸುಳ್ಳು ಅರ್ಜಿಗಳನ್ನು ವಜಾ ಮಾಡಬೇಕು’ ಎಂದು ಸುಪ್ರೀಂ ಕೋರ್ಟ್‌ಗೆ ಅಟಾರ್ನಿ ಜನರ್ ಮನವಿ ಮಾಡಿದರು.
ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ 2018ರ ಡಿಸೆಂಬರ್ 14ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಕ್ಲೀನ್‌ಚಿಟ್ ನೀಡಿತ್ತು. ಈ ತಿರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಕೆಯಾದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.