ವಿಜಯಪುರ, ಮಾ.4- ಶಿವರಾತ್ರಿ ಹಿನ್ನಲೆ ದೇವರ ದರ್ಶನಕ್ಕೆ ಸರದಿ ಸಾಲಿನಲ್ಲಿ ಜನಸಾಮಾನ್ಯರು ನಿಂತಿದ್ದರೂ ಗೃಹಸಚಿವ ಎಂ.ಬಿ.ಪಾಟೀಲ್ ನೇರವಾಗಿ ದೇಗುಲ ದ ಒಳಪ್ರವೇಶಿಸಲು ಮುಂದಾಗುತ್ತಿದ್ದಂತೆ ವಿದ್ಯಾರ್ಥಿನಿಯೊರ್ವಳು ಸಚಿವರನ್ನೆ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆದಿದೆ.
ತಮ್ಮದೇ ಒಡೆತನದಲ್ಲಿ ಇರುವ ಲಿಂಗದ ಗುಡಿಗೆ ಆಗಮಿಸಿದ ಸಚಿವರು, ಸರದಿ ಸಾಲಿನಲ್ಲಿ ನಿಲ್ಲದೇ ನೇರವಾಗಿ ಗರ್ಭಗುಡಿ ಪ್ರವೇಶಿಸಿದರು. ದರ್ಶನ ಪಡೆದು ವಾಪಸ್ ಬರುವ ವೇಳೆ ಸರದಿ ಸಾಲಿನಲ್ಲಿ ನಿಂತಿದ್ದ ವಿದ್ಯಾರ್ಥಿನಿ ನೇರವಾಗಿ ಗೃಹ ಸಚಿವರನ್ನು ಪ್ರಶ್ನಿಸಿಯೇ ಬಿಟ್ಟಳು.
ಏನ್ ಸಾರ್ ಒಂದು ಗಂಟೆಯಿಂದ ಸರದಿಯಲ್ಲಿ ನಿಂತಿದ್ದೇವೆ. ನೀವು ನೋಡಿದರೆ ಏಕಾಏಕಿ ಹೋಗುತ್ತಿದ್ದೀರಿ ಹೇಗೆ ಸರ್ ಎಂದು ಪ್ರಶ್ನಿಸಿದಳು. ವಿದ್ಯಾರ್ಥಿನಿಯ ಪ್ರಶ್ನೆಯಿಂದ ಮುಜುಗರಕ್ಕೊಳಗಾದ ಸಚಿವರು, ಇಲ್ಲ ಮಗು ನನಗೆ ಅರ್ಜೆಂಟ್ ಇದೆ, ಬೆಂಗಳೂರಿಗೆ ಹೋಗಬೇಕಾಗಿದೆ. ಕ್ಷಮಿಸು, ನನಗೂ ಸಾರ್ವಜನಿಕರ ಜತೆ ಬೆರೆಯುವ ಆಸೆ.
ಇದೇ ಕಾರಣಕ್ಕೆ ಗೃಹ ಸಚಿವನಾಗಿದ್ದರೂ ಪೊಲೀಸರ ಝೀರೋ ಟ್ರಾಫಿಕ್ ಸೌಲಭ್ಯ ನಿರಾಕರಿಸಿದ್ದೇನೆ. ಕ್ಷಮಿಸು ಎಂದು ವಿದ್ಯಾರ್ಥಿನಿಯನ್ನು ಸಮಾಧಾನಪಡಿಸಿ ಅಲ್ಲಿಂದ ನಿರ್ಗಮಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಧೈರ್ಯ ಮೆಚ್ಚಿ ಆಕೆಯೊಂದಿಗೆ ಕೆಲಕಾಲ ಉಭಯಕುಶಲೋಪರಿ ನಡೆಸಿದರು.