janadhvani

Kannada Online News Paper

ಇಸ್ಲಾಂ ಶಾಂತಿ ಬಯಸುತ್ತದೆ,ಆದರೆ ಕೆಲ ರಾಷ್ಟ್ರಗಳು ಹಿಂಸೆಗೆ ಪ್ರಚೋದನೆ ನೀಡುತ್ತಿವೆ- ಸುಷ್ಮಾಸ್ವರಾಜ್

ಅಬುಧಾಬಿ,ಮಾ.1:- ಜಾಗತಿಕ ಭಯೋತ್ಪಾದನೆ ವಿರುದ್ಧ ಸಮರ ಸಾರಿದ್ದೇವೆಯೇ ಹೊರತು ಯಾವುದೇ ಧರ್ಮದ ವಿರುದ್ಧ ಭಾರತ ಹೋರಾಟ ನಡೆಸುತ್ತಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾಸ್ವರಾಜ್ ಸ್ಪಷ್ಟಪಡಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಯಿಂದ ಹಿಂಸಾಚಾರ ಹೆಚ್ಚಳವಾಗಿ ಅಮಾಯಕರು ಬಲಿಯಾಗುತ್ತಿದ್ದಾರೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಅರಬ್ ಸಂಯುಕ್ತ ರಾಷ್ಟ್ರದ ರಾಜಧಾನಿ ಅಬುಧಾಬಿಯಲ್ಲಿ ಇಸ್ಲಾಮಿಕ್ ಸಹಕಾರ ಸಂಘಟನೆ (ಐಓಸಿ) ಸಮಾವೇಶದಲ್ಲಿ ಗೌರವ ಅತಿಥಿಯಾಗಿ ಮಾತನಾಡಿದ ಸುಷ್ಮಾ ಸ್ವರಾಜ್, ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಆತ್ಮಹತ್ಯಾ ದಾಳಿಗೆ 40 ಸಿಆರ್‌ಪಿಎಫ್ ಯೋಧರನ್ನು ಬಲಿಪಡೆದ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಹೆಚ್ಚಾಗುತ್ತಿರುವ ಭಯೋತ್ಪಾದನೆ ಬಗ್ಗೆ ಪ್ರಸ್ತಾಪಿಸಿ ಪುಲ್ವಾಮಾ ದಾಳಿಯನ್ನು ಖಂಡಿಸಿದರು.

ಇಸ್ಲಾಂ ಧರ್ಮ ಶಾಂತಿ ಬಯಸುತ್ತದೆ. ಆದರೆ, ಕೆಲ ರಾಷ್ಟ್ರಗಳು ಹಿಂಸೆಗೆ ಪ್ರಚೋದನೆ ನೀಡುತ್ತಿವೆ ಎಂದು ಅವರು ಆರೋಪಿಸಿದರು.

ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಯನ್ನು ಧಮನ ಮಾಡಲು ಐಓಸಿ ರಾಷ್ಟ್ರಗಳು ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಓಐಸಿ ಸಮಾವೇಶ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಭಾರತದಲ್ಲಿ ಎಲ್ಲ ಧರ್ಮ ಮತ್ತು ಸಂಸ್ಕೃತಿಗೆ ಅಪಾರ ಗೌರವವಿದೆ. ಮಹಾತ್ಮಗಾಂಧೀಜಿ ಇಡೀ ವಿಶ್ವಕ್ಕೆ ಶಾಂತಿ, ಅಹಿಂಸೆಯ ಸಂದೇಶ ನೀಡಿದ್ದಾರೆ ಎಂದು ಹೇಳಿದರು.

ಭಾರತ ಕೊಲ್ಲಿ ರಾಷ್ಟ್ರಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದೆ ಎಂದು ಅವರು ಹೇಳಿದರು.

ಇದೇ ಮೊದಲ ಬಾರಿಗೆ ಓಐಸಿ ಸಮಾವೇಶದಲ್ಲಿ ಗೌರವ ಅತಿಥಿಯಾಗಿ ಪಾಲ್ಗೊಳ್ಳಲು ಸುಷ್ಮಾಸ್ವರಾಜ್ ಅವರಿಗೆ ಆಹ್ವಾನ ನೀಡಲಾಗಿತ್ತು.

error: Content is protected !! Not allowed copy content from janadhvani.com