ಬೆಂಗಳೂರು: ಫೆ. 22: ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ (ಎಸ್ಸೆಸ್ಸೆಫ್) ರಾಷ್ಟ್ರೀಯ ಸಮ್ಮೇಳನವು ಫೆ.23, 24 ರಂದು ಹೊಸದಿಲ್ಲಿ ಯಲ್ಲಿ ನಡೆಯಲಿದ್ದು, ಫೆ. 23ರಂದು ಬೆಳಗ್ಗೆ 8.30ಕ್ಕೆ ರಾಮಲೀಲ ಮೈದಾನದಲ್ಲಿ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗುವುದು.
ಅಂದು ಬೆಳಗ್ಗೆ.9.30ಕ್ಕೆ ಸಿವಿಕ್ ಸೆಂಟರ್ ಸಭಾಂಗಣದಲ್ಲಿ ನಡೆಯುವ ರಾಷ್ಟ್ರೀಯ ಪ್ರತಿನಿಧಿ ಸಮ್ಮೇಳನವನ್ನು ಮಾಜಿ ಉಪ ರಾಷ್ಟ್ರಪತಿ ಡಾ. ಹಾಮಿದ್ ಅನ್ಸಾರಿ ಉದ್ಘಾಟಿಸುವರು.
ಜ.24 ರಂದು ಬೆಳಗ್ಗೆ 9ಕ್ಕೆ ರಾಜಘಾಟ್ ನಿಂದ ರಾಮಲೀಲ ಮೈದಾನಕ್ಕೆ ಬೃಹತ್ ವಿದ್ಯಾರ್ಥಿ ಜಾಥಾ ನಡೆಯಲಿದೆ. 10 ಗಂಟೆಗೆ ಆರಂಭವಾಗುವ ಸಮಾರೋಪ ಮಹಾ ಸಮ್ಮೇಳನವನ್ನು ಸುನ್ನಿ ಉಲಮಾ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎಪಿ ಅಬೂಬಕರ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ವಿಶ್ವ ವಿಖ್ಯಾತ ಆಧ್ಯಾತ್ಮಿಕ ಗುರು ಸೈಯದ್ ಮುಹಮ್ಮದ್ ಅಮೀನ್ ಮಿಯಾ ಬರಕಾತಿ ಮರಾಹ್ರಾ ಶರೀಫ್ ಉದ್ಘಾಟಿಸುವರು.
ಸೈಯದ್ ಫುರ್ಖಾನ್ ಅಲೀ ಚಿಶ್ತೀ ಅಜ್ಮೀರ್, ಸೈಯದ್ ಇಬ್ರಾಹೀಮ್ ಖಲೀಲುಲ್ ಬುಖಾರಿ ಕೇರಳ, ಅಹ್ಸನ್ ರಝಾ ಖಾದಿರಿ ಆಲಾ ಹಝರತ್ ಬರೇಲ್ವಿ, ಸೈಯದ್ ಮುಈನುದ್ದೀನ್ ಅಶ್ರಫಿ ಕಚೌಚಾ ಶರೀಫ್, ಡಾ. ಮುಕರ್ರಂ ಫತೇಪುರಿ ದೆಹಲಿ, ಗುಲಾಂ ರಸೂಲ್ ಎಮ್ಮೆಲ್ಸಿ ಬಿಹಾರ, ಅಕ್ಬರ್ ಅಲೀ ಫಾರೂಖಿ ಚತ್ತೀಸ್ಗಡ, ಝಾಫರ್ ಸಾದಿಕ್ ಶಾಹ್ ಬಾಂಗ್ಲಾದೇಶ, ಶೈಖ್ ಅಶ್ರಫ್ ಆಫಂದಿ ಜರ್ಮನಿ, ಶೈಖ್ ಝೈದುರ್ರಹ್ಮಾನ್ ವೆಸ್ಟ್ ಇಂಡೀಸ್, ಶೈಖ್ ಮುಹಮ್ಮದ್ ಬಶರೀ ಅಬೂದಾಭಿ, ಗುಲಾಂ ನಬಿ ಲತೀಫಿ ಮಾರಿಷಸ್, ಡಾ. ಎಪಿ ಅಬ್ದುಲ್ ಹಕೀಂ ಅಝ್ಹರಿ, ಡಾ. ಮುಹಮ್ಮದ್ ಫಾಝಿಲ್ ಹಝ್ರತ್ ಸೇರಿದಂತೆ ದೇಶ ವಿದೇಶಗಳ ಪ್ರಮುಖರು ಭಾಗವಹಿಸಲಿದ್ದಾರೆ.
ಸಮ್ಮೇಳನ ಪ್ರಚಾರಾರ್ಥ ಕಳೆದ ಜ.11ರಿಂದ ಫೆ. 7ರ ವರೆಗೆ ಕಾಶ್ಮೀರದಿಂದ ಕೇರಳ ತನಕ “ಹಿಂದ್ ಸಫರ್” ಭಾರತ ಯಾತ್ರೆ ಯನ್ನು ಹಮ್ಮಿಕೊಂಡು 14,000 ಕಿ.ಮೀ. ಕ್ರಮಿಸಲಾಗಿತ್ತು. ಪ್ರಸ್ತುತ ಯಾತ್ರೆಯ ಧ್ಯೇಯವಾಕ್ಯ ” ಸುಶಿಕ್ಷಿತ, ಸಹಿಷ್ಣುತೆಯ ಭಾರತಕ್ಕಾಗಿ” ಎಂಬ ವಿಷಯದ ಮೇಲೆ ಸಮ್ಮೇಳನದಲ್ಲಿ ವಿವಿಧ ಚರ್ಚಾಗೋಷ್ಠಿಗಳು ನಡೆಯಲಿವೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್ ತಿಳಿಸಿದ್ದಾರೆ.