janadhvani

Kannada Online News Paper

ಮಂಗಳೂರು ಸೇರಿ ಒಟ್ಟು ಆರು ವಿಮಾನ ನಿಲ್ದಾಣಗಳು ಖಾಸಗಿವ್ಯಾಪ್ತಿಗೆ

ನವದೆಹಲಿ: ಮಂಗಳೂರು ಸೇರಿ ಒಟ್ಟು ಆರು ವಿಮಾನ ನಿಲ್ದಾಣಗಳನ್ನು ಖಾಸಗಿವ್ಯಾಪ್ತಿಗೆ ಒಳಪಡಿಸಲು ಸರ್ಕಾರ ಪ್ರಯತ್ನಿಸುತ್ತಿದೆ.ಈಗ ಇದರ ಭಾಗವಾಗಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ವಹಣೆಯಲ್ಲಿ ಬರುವ ಆರು ವಿಮಾನ ನಿಲ್ದಾಣಗಳ ಕಾರ್ಯಾಚರಣೆಗೆ ಈಗ 10 ಕಂಪನಿಗಳಿಂದ ಒಟ್ಟು 32 ತಾಂತ್ರಿಕ ಬಿಡ್ ಗಳನ್ನು ಸ್ವೀಕರಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ವಿಮಾನ ನಿಲ್ದಾಣಗಳ ಪ್ರಾಧಿಕಾರವು ಮುಕ್ತ ಅಂತರರಾಷ್ಟ್ರೀಯ ಸ್ಪರ್ಧಾತ್ಮಕ ಹರಾಜಿನ ಪ್ರಕ್ರಿಯೆಯ ಅಂಗವಾಗಿ ಗುವಾಹಾಟಿ, ತಿರುವನಂತಪುರಂ, ಲಕ್ನೌ, ಮಂಗಳೂರು, ಅಹಮದಾಬಾದ್ ಮತ್ತು ಜೈಪುರ್ ಸೇರಿ ಆರು ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳಲು ಬಿಡ್ ನ್ನು ಕರೆದಿತ್ತು. ಈ ಹಿನ್ನಲೆಯಲ್ಲಿ ಈಗ ಆರು ವಿಮಾನ ನಿಲ್ದಾಣಗಳಿಗೆ ಒಟ್ಟು 10 ಕಂಪನಿಗಳಿಂದ 32 ತಾಂತ್ರಿಕ ಬಿಡ್ ಗಳನ್ನು ಸ್ವೀಕರಿಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

“ಅಹ್ಮದಾಬಾದ್ ಮತ್ತು ಜೈಪುರ್ ವಿಮಾನ ನಿಲ್ದಾಣಗಳು ತಲಾ ಏಳು ಬಿಡ್ಗಳನ್ನು ಸ್ವೀಕರಿಸಿದ್ದರೆ, ಲಕ್ನೋ ಮತ್ತು ಗುವಾಹಟಿ ಆರು ಬಿಡ್ ಗಳನ್ನು ಸ್ವೀಕರಿಸಿವೆ. ಇನ್ನು ಮಂಗಳೂರು ಮತ್ತು ತಿರುವನಂತಪುರಂ ಸಹ ಮೂರು ಬಿಡ್ ಗಳನ್ನು ಸ್ವೀಕರಿಸಿವೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಂತ್ರಿಕ ಬಿಡ್ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 14 ಆಗಿತ್ತು. ಈಗ ಇದೇ ಫೆಬ್ರವರಿ 25 ರಂದು ಎಎಐ ಹಣಕಾಸು ಬಿಡ್ ಗಳನ್ನು ತೆರೆಯಲಿದೆ. ಇದಾದ ನಂತರ 28 ರಂದು ವಿಜೇತ ಬಿಡ್ ಗಳನ್ನು ಘೋಷಿಸಲಾಗುವುದು ಎನ್ನಲಾಗಿದೆ.

ಕಳೆದ ವರ್ಷ ನವೆಂಬರ್ ನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಆಧಾರದ ಮೇಲೆ ಆರು ಎಎಐ-ಚಾಲಿತ ವಿಮಾನ ನಿಲ್ದಾಣಗಳನ್ನು ನಿರ್ವಹಿಸುವ ಪ್ರಸ್ತಾಪವನ್ನು ಸರಕಾರ ಅಂತಿಮಗೊಳಿಸಿತ್ತು.ಈ ಹಿನ್ನಲೆಯಲ್ಲಿ ಈಗ ಎಂದಿನಂತೆ ಬಿಡ್ ಪ್ರಕ್ರಿಯೆಯನ್ನು ಮುಗಿಸಲಾಗಿದೆ.
ಕೊಚ್ಚಿ ನಿಲ್ದಾಣದ ಆಸಕ್ತಿ !
ಮಂಗಳೂರು ವಿಮಾನ ನಿಲ್ದಾಣವನ್ನು ಗುತ್ತಿಗೆ ಪಡೆದುಕೊಂಡು ಅಭಿವೃದ್ಧಿಪಡಿಸುವುದಕ್ಕೆ ನೆರೆಯ ರಾಜ್ಯವಾಗಿರುವ ಕೇರಳದ ಅತಿದೊಡ್ಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ನೋಡಿಕೊಳ್ಳುತ್ತಿರುವ ಸಿಐಎಎಲ್‌ ಆಸಕ್ತಿ ವಹಿಸಿರುವುದು ಕುತೂಹಲ ಮೂಡಿಸಿದೆ. ಕೇರಳದಲ್ಲಿ ಈಗ ಒಟ್ಟು ನಾಲ್ಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿದ್ದು, ಇತ್ತೀಚೆಗಷ್ಟೇ ಮಂಗಳೂರಿಗೆ ಸ್ಪರ್ಧಿಯಾಗುವ ರೀತಿಯಲ್ಲಿ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೂಡ ಕಾರ್ಯಾರಂಭಿಸಿದೆ. ಹೀಗಾಗಿ ಸಿಐಎಎಲ್‌ ಈಗ ಪಾಲ್ಗೊಂಡಿರುವುದು ವಿಶೇಷ. ಬಿಡ್‌ನ‌ಲ್ಲಿ ಭಾಗವಹಿಸಿದವರ ಪೈಕಿ ಯಾರು ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಗೆ ಅರ್ಹತೆ ಪಡೆದುಕೊಳ್ಳಲಿದ್ದಾರೆ ಎನ್ನುವುದು ಫೆ.26ಕ್ಕೆ ಗೊತ್ತಾಗಲಿದೆ ಎಂದು ಮೂಲಗಳು ತಿಳಿಸಿವೆ.

error: Content is protected !! Not allowed copy content from janadhvani.com