janadhvani

Kannada Online News Paper

ದೇಶದ ಸಂಪನ್ಮೂಲಗಳ ಮೇಲೆ ಎಲ್ಲರಿಗೂ ಸಮಾನ ಹಕ್ಕುಗಳಿವೆ: ರಾಷ್ಟ್ರಪತಿ

ನವದೆಹಲಿ:ಸಮಾಜದ ಎಲ್ಲ ವರ್ಗದವರೂ ಪ್ರಗತಿ ಹೊಂದಿದ ಭವ್ಯ ಹಾಗೂ ಸದೃಢ ಭಾರತ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ನಾವು ಸಾಗಬೇಕಾಗಿರುವ ಹಾದಿ ಇನ್ನೂ ಬಹಳಷ್ಟಿದೆ ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಹೇಳಿದ್ದಾರೆ.

70ನೇ ಗಣರಾಜ್ಯೋತ್ಸವದ ಮುನ್ನಾದಿನ ರಾಷ್ಟ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ”ಧರ್ಮ, ಜಾತಿ ಮತ್ತು ಲಿಂಗ ತಾರತಮ್ಯವಿಲ್ಲದೇ ದೇಶದ ಸಂಪನ್ಮೂಲಗಳ ಮೇಲೆ ಎಲ್ಲರಿಗೂ ಸಮಾನ ಹಕ್ಕುಗಳಿವೆ. ಕಲ್ಯಾಣ ಎನ್ನುವುದು ನಮ್ಮ ಸಂಸ್ಕೃತಿಯ ಭಾಗ. ನಾವು ಇಂದು ತೆಗೆದುಕೊಳ್ಳುವ ನಿರ್ಧಾರ ಹೊಸ ಭಾರತಕ್ಕೆ ನಾಂದಿಯಾಗುತ್ತದೆ,” ಎಂದು ಹೇಳಿದರು. ಈ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯನ್ನು ನೆನಪಿಸಿದ ಅವರು, ಪ್ರಜಾಪ್ರಭುತ್ವ ಅತಿದೊಡ್ಡ ಶಕ್ತಿಯಾಗಿದೆ ಎಂದರು.

ಹದ್ದಿನ ಕಣ್ಣು: ಗಣರಾಜ್ಯೋತ್ಸವ ಪರೇಡ್‌ ಸಾಗುವ ರಾಜಪಥದಿಂದ ಕೆಂಪುಕೋಟೆವರೆಗಿನ 8 ಕಿ.ಮೀ ಮಾರ್ಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಹುಹಂತದ ಭದ್ರತೆ ಕೈಗೊಳ್ಳಲಾಗಿದೆ. ಎನ್‌ಎಸ್‌ಜಿ ಹಾಗೂ ಸ್ವಾಟ್‌ ಕಮಾಂಡೊಗಳು ಸೇರಿ 30 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಹಾಗೂ 3000 ಸಾವಿರ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿದೆ.

ಸಾವಿರಾರು ಸಂಖ್ಯೆಯಲ್ಲಿ ಹೈ ಡೆನ್ಸಿಟಿ ಹಾಗೂ ಫೇಸ್‌ ರೆಕಗ್ನಿಷನ್‌ ತಂತ್ರಜ್ಞಾನದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಆ್ಯಂಟಿ ಏರ್‌ಕ್ರಾಫ್ಟ್‌ ಗನ್‌ಗಳನ್ನು ನಿಯೋಜಿಸಲಾಗಿದೆ. ಗಗನಚುಂಬಿ ಕಟ್ಟಡದ ಮೇಲೆ ಕುಳಿತು ಚಲನವಲನಗಳ ಮೇಲೆ ಶಾರ್ಪ್‌ ಶೂಟರ್‌ಗಳ ಹದ್ದಿನ ಕಣ್ಣಿದೆ. ಭದ್ರತೆ ಕಾರಣದಿಂದ ಮೆಟ್ರೊ ರೈಲು ಸೇವೆಯಲ್ಲಿ ವ್ಯತ್ಯಯವಾಗಲಿದೆ.
ಆಕಾಶ ಮಾರ್ಗದಲ್ಲಿ ಕಂಡುಬರುವ ಯಾವುದೇ ಅನುಮಾನಸ್ಪದ ವಸ್ತುಗಳನ್ನು ಹಾಗೂ ಅನುಮತಿ ಇಲ್ಲದೆ ದಿಲ್ಲಿ ವಾಯು ಪ್ರದೇಶ ಪ್ರವೇಶಿಸುವ ವಿಮಾನಗಳನ್ನು ಹೊಡೆದುರುಳಿಸಲು ಭದ್ರತಾಪಡೆಗಳಿಗೆ ಅನುಮತಿ ನೀಡಲಾಗಿದೆ.

error: Content is protected !! Not allowed copy content from janadhvani.com