ಪೊನ್ನಾನಿ: ಪೊನ್ನಾನಿಯ ಐತಿಹಾಸಿಕ ಮಿಸ್ರಿ ಮಸೀದಿಯನ್ನು ಕೆಡವಿದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇತಿಹಾಸಗಾರರು ಸೇರಿದಂತೆ ಅನೇಕ ಜನರು ಮತ್ತು ಸಂಘಟನೆಗಳು ಕೂಡ ಪ್ರತಿಭಟನೆಗಿಳಿದಿದೆ.ಪ್ರಮುಖ ಇತಿಹಾಸಕಾರ, ಎಂ ಜಿ ಎಸ್ ನಾರಾಯಣ್ ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ಶತಮಾನಗಳಷ್ಟು ಹಳೆಯದಾದ ಮಿಸ್ರಿ ಮಸೀದಿಯನ್ನು ಕೆಡಹಿ ಹಾಕಿದ್ದು ಇತಿಹಾಸಕ್ಕೆ ಮಾಡಿದ ಅತ್ಯಂತ ಕ್ರೂರ ಕೃತ್ಯವಾಗಿದೆ ಎಂದಿದ್ದಾರೆ.
ಅಂತಹ ಐತಿಹಾಸಿಕ ಸ್ಮಾರಕಗಳು ಭವಿಷ್ಯದ ಜನರಿಗಾಗಿ ಕಾದಿರಿಸಲಾದ ಒಂದು ಅಮೂಲ್ಯ ನಿಧಿಯಾಗಿದೆ. ಅದು ಒಂದು ದಿವಸದಲ್ಲಿ ನೆಲಸಮವಾಗಿ ಬಿಡುವುದು ಅತ್ಯಂತ ಖೇದಕರ ಸಂಗತಿಯಾಗಿದೆ. ಸ್ಪೀಕರ್ ಅವರ ಇತಿಹಾಸ ಸಂರಕ್ಷಣಾ ಯೋಜನೆಯ ಜಾರಿಗೆ ಇನ್ನೂ ಹಲವು ಮಜಲುಗಳನ್ನು ದಾಟ ಬೇಕಿದೆ ಎಂದು ಅವರು ಹೇಳಿದರು.
ವ್ಯಾಪಕ ಪ್ರತಿಭಟನೆ ಉಂಟಾದ ಕಾರಣ ಮಸೀದಿ ಕೆಡವುದನ್ನು ಅರ್ಧದಲ್ಲೇ ನಿಲ್ಲಿಸಲಾಯಿತು, ಆದರೆ ಮಸೀದಿಯನ್ನು ಹಳೆಯ ಮಾದರಿಯಲ್ಲಿ ನಿರ್ಮಿಸುವ ಬಗ್ಗೆ ಮಸೀದಿಯ ಆಡಳಿತ ಸಮಿತಿಗೆ ತಾತ್ಪರ್ಯವಿಲ್ಲ.
ಮಸೀದಿಯಲ್ಲಿ ನಮಾಝ್ ನಿರ್ವಹಿಸಲು ಸ್ಥಳ ಸಾಕಾಗುವುದಿಲ್ಲ ಎನ್ನುವ ಕಾರಣಕ್ಕಾಗಿ ವಿಸ್ತರಿಸುವ ಉದ್ದೇಶದಿಂದ ಕೆಡಹಲಾಗಿದೆ ಎಂದು ಸಮಿತಿಯ ಅಧಿಕಾರಿಗಳು ವಿವರಿಸಿದರು.ಈ ಮಸೀದಿಯನ್ನು ಪಾರಂಪರಿಕ ಪಟ್ಟಿಯಲ್ಲಿ ಒಳಪಡಿಸಿರುವ ಬಗ್ಗೆ ತಿಳಿದಿಲ್ಲ. ಮಸೀದಿಯನ್ನು ಕೆಡವುದರ ವಿರುದ್ಧ ಕೆಲವು ಗ್ರಾಮಸ್ಥರು ಮತ್ತು ಇತಿಹಾಸಕಾರರು ಪ್ರತಿಭಟನೆಗೆ ಮುಂದಾಗಿದ್ದಾರೆ. ಮಸೀದಿಯ ಆಡಳಿತ ಸಮಿತಿಯು ನಗರಸಭಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿತ್ತು. ಮಸೀದಿಯ ವಿಸ್ತರಣೆ ಅತ್ಯಗತ್ಯ ಎಂದು ಮಾತುಕತೆಯಲ್ಲಿ ವಿವರಿಸಲಾಗಿದೆ.ಏತನ್ಮಧ್ಯೆ, ನಾಲ್ಕು ಎಕರೆಯಷ್ಟು ವಿಶಾಲ ಜಾಗದಲ್ಲಿ ಈ ಮಸೀದಿ ಇದ್ದು, ಉಳಿದ ಸ್ಥಳದಲ್ಲಿ ವಿಸ್ತಾರ ಮಸೀದಿ ನಿರ್ಮಿಸ ಬಹುದಾಗಿದ್ದು, ಐತಿಹಾಸಿಕ ಮಸೀದಿಯನ್ನು ಅದೇ ರೂಪದಲ್ಲಿ ಸಂರಕ್ಷಿಸುವಂತೆ ಸ್ಪೀಕರ್ ಸೇರಿದಂತೆ ಸೂಚನೆ ನೀಡಿದ್ದಾರೆ.ಕೆಡವಲ್ಪಟ್ಟ ಮಸೀದಿಯನ್ನು ಸರಿಪಡಿಸುವವರೆಗೂ ವಿಶ್ರಮವಿಲ್ಲ ಎಂದು ವಿವಿಧ ಇತಿಹಾಸಕಾರರು ನಾಗರಿಕರು ಪಟ್ಟು ಹಿಡಿದಿದ್ದಾರೆ.ಇತಿಹಾಸಕಾರರು ಮತ್ತು ಸ್ಥಳೀಯ ಜನರನ್ನು ಒಳಗೊಂಡ ಒಂದು ಪರಂಪರೆ ಸಂರಕ್ಷಣಾ ಸಮಿತಿಯನ್ನು ಸ್ಥಾಪಿಸಲು ಯೋಜಿಸಲಾಗಿದೆ.
ಸ್ಪೀಕರ್ ನಿರ್ಮಿಸಲು ಉತ್ಸುಕರಾಗಿದ್ದ ಮುಸೊರಿಸ್-ಶೈಲಿಯ ಆನುವಂಶಿಕ ಸಂರಕ್ಷಣಾ ಯೋಜನೆಯನ್ನು ಜಾರಿಗೆ ತರಲು ಇನ್ನೂ ಹೆಚ್ಚಿನ ತೊಂದರೆಗಳನ್ನು ಎದುರಿಸಬೇಕಾಗಿದೆ ಎನ್ನಲಾಗಿದೆ.
ಪುರಾತನ ಮಸೀದಿಯಾದ ಕಾರಣ ಅದು ಜೀರ್ಣಾವಸ್ಥೆಯಲ್ಲಿತ್ತು ಎನ್ನುವ ಮಸೀದಿ ಸಮಿತಿಯ ವಾದವನ್ನು ಸಮೀಪದ ನಾಗರಿಕು ಅಲ್ಲಗೆಳದಿದ್ದಾರೆ.
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಮಸೀದಿಯನ್ನು ದುರಸ್ತಿ ಮಾಡಲಾಗುತ್ತಿದ್ದು, ಇದನ್ನು ಟಾರಸಿ ಕಟ್ಟಡವಾಗಿ ಮಾರ್ಪಡಿಸುವ ಸಲುವಾಗಿ ಕೆಡಹಲು ಮುಂದಾಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.