ನವದೆಹಲಿ: ಜನಪ್ರಿಯ ಮೆಸೇಜಿಂಗ್ ಆ್ಯಪ್ ಆದ ವಾಟ್ಸಪ್ ಭಾರತದ ಮುಖ್ಯಸ್ಥರನ್ನಾಗಿ ಅಭಿಜಿತ್ ಬೋಸ್ ರವರನ್ನು ಆಯ್ಕೆ ಮಾಡಿದೆ.
ಅಭಿಜಿತ್ ಬೋಸ್ ಮುಂದಿನ ವರ್ಷದಲ್ಲಿ ಅಧಿಕಾರವನ್ನು ಸ್ವೀಕರಿಸಲಿದ್ದು, ಕ್ಯಾಲಿಫೋರ್ನಿಯಾದ ಹೊರಗಿನ ವಾಟ್ಸಪ್ ತಂಡವನ್ನು ಪೂರ್ಣ ಪ್ರಮಾಣದಲ್ಲಿ ನಿರ್ವಹಿಸುವ ಭಾರತದ ಪ್ರಥಮ ವ್ಯಕ್ತಿಯಾಗಿದ್ದಾರೆ. ಈ ಮೂಲಕ ಭಾರತ ಸರ್ಕಾರ ವಾಟ್ಸಪ್ ಸಂಸ್ಥೆಯ ಮುಂದಿಟ್ಟ ಬೇಡಿಕೆಗಳಲ್ಲಿ ಮಹತ್ವಪೂರ್ಣವಾದ ಬೇಡಿಕೆಯೊಂದು ಈಡೇರಿದಂತಾಗಿದೆ.
ಬೋಸ್ ಹಾಗೂ ಅವರ ತಂಡ ಭಾರತದ ದೊಡ್ಡ ಹಾಗೂ ಸಣ್ಣ ಮಾದರಿಯ ವ್ಯವಹಾರಗಳೆರಡರ ಕುರಿತು ಗ್ರಾಹಕರೊಂದಿಗೆ ಮಾತುಕತೆಯನ್ನು ನಡೆಸುತ್ತದೆಂದು ಕಂಪನಿ ತಿಳಿಸಿದೆ.
ವಾಟ್ಸಪ್ ಭಾರತದ ಆಡಳಿತ ನೀತಿಗೆ ಬದ್ಧವಾಗಿದೆ. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆಯಲ್ಲಿ ಜನರನ್ನು ಸಂಪರ್ಕಿಸಲು ಮತ್ತು ಬೆಂಬಲಿಸಲು ಸಹಾಯ ಮಾಡುವ ಮೂಲಕ ನಮ್ಮ ಬದ್ಧತೆಯನ್ನು ಉಳಿಸಿಕೊಳ್ಳುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಯಶಸ್ವಿ ವಾಣಿಜ್ಯೋದ್ಯಮಿಯಾಗಿ, ಭಾರತದಾದ್ಯಂತ ಉದ್ಯಮಗಳಿಗೆ ಸೇವೆ ಸಲ್ಲಿಸಲು ಬೋಸ್ ಅರ್ಥಪೂರ್ಣವಾದ ಪಾಲುದಾರಿಕೆಗಳನ್ನು ನಿರ್ಮಿಸುತ್ತಾರೆಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕರಿ ಮ್ಯಾಟ್ ಐಡಿಮಾ ಹೇಳಿದ್ದಾರೆ.
2011ರಲ್ಲಿ ಸ್ಥಾಪನೆಯಾದ ಎಲೆಕ್ಟ್ರಾನಿಕ್ ಪಾವತಿ ಎಜಿಟ್ಯಾಬ್ ಸಂಸ್ಥೆಯಲ್ಲಿ ಸಹ ಸಂಸ್ಥಾಪಕ ಹಾಗೂ ಸಿಇಓ ಆಗಿ ಅಭಿಜಿತ್ ಬೋಸ್ ಅವರನ್ನು ನೇಮಕ ಮಾಡಿದೆ.
ಸುಳ್ಳು ಸುದ್ದಿ ಮತ್ತು ಗುಂಪು ಹತ್ಯೆ ವಿಚಾರಗಳು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಫೇಸ್ ಬುಕ್ ಮಾಲೀಕತ್ವದ ವಾಟ್ಸಪ್ ಗೆ ಎರಡು ಲೀಗಲ್ ನೋಟಿಸ್ ಕಳುಹಿಸಿತ್ತು. ಸುಳ್ಳು ಸುದ್ದಿಗಳನ್ನು ಮತ್ತು ಗುಂಪು ಹತ್ಯೆಗೆ ಸಂಬಂಧಿಸಿದ ಸುದ್ದಿ, ವಿಡಿಯೋಗಳನ್ನು ತಡೆಗಟ್ಟಬೇಕು ಎಂದು ಸೂಚಿಸಿತ್ತು. ಅಷ್ಟೇ ಅಲ್ಲದೇ ಸಮಸ್ಯೆಗಳನ್ನು ಬಗೆ ಹರಿಸಲು ಸ್ಥಳೀಯ ವ್ಯಕ್ತಿಗಳನ್ನು ನೇಮಿಸಬೇಕು. ಈ ಸೂಚನೆಯನ್ನು ನಿರ್ಲಕ್ಷಿಸಿದರೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಭಾರತ ಸರ್ಕಾರ ವಾಟ್ಸಪ್ ಗೆ ಎಚ್ಚರಿಕೆ ನೀಡಿತ್ತು.