ಮಕ್ಕಾ: ಅರಫಾ ದಿನದಲ್ಲಿ ಕಅಬಾಲಯಕ್ಕೆ ಹೊದಿಸಲಾಗುವ ಕಿಸ್ವಾವನ್ನು ಮಕ್ಕಾದ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಮಕ್ಕಾದ ರಾಜ್ಯಪಾಲ, ಸೌದಿ ಆಡಳಿತಾಧಿಕಾರಿ, ಪುಣ್ಯಗೇಹಗಳ ಖಾದಿಮರೂ ಆದ ಸಲ್ಮಾನ್ ರಾಜನ ಆಪ್ತ ಸಲಹೆಗಾರ ಅಮೀರ್ ಖಾಲಿದ್ ಅಲ್ ಫೈಝಲ್ ರಾಜ ಕುಮಾರ, ಕಅಬಾಲಯದ ಸಂರಕ್ಷಣಾ ಉಸ್ತುವಾರಿ ಡಾ.ಶೈಖ್ ಸಾಲಿಹ್ ಬಿನ್ ಝೈನುಲ್ ಆಬಿದೀನ್ ಅವರಿಗೆ ಹಸ್ತಾಂತರಿಸಿದರು.
ಅಲ್ ಶೈಬಿ ಕುಟುಂಬವು ಕಅಬಾಲಯದ ಕೀಲಿಕೈಯ ಸಂರಕ್ಷಣೆಯ ಉಸ್ತುವಾರಿಯನ್ನು ವಹಿಸುತ್ತಿದೆ. ಪ್ರತೀ ವರ್ಷ ದುಲ್ಹಜ್ ತಿಂಗಳಲ್ಲಿ ಕಅಬಾಲಯಕ್ಕೆ ಹೊದಿಸಲಾಗುವ ಕಿಸ್ವಾವನ್ನು ಅಲ್ ಶೈಬಿ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತದೆ.
ಪರಿಶುದ್ಧ ಹಜ್ ಕರ್ಮ ನಿರ್ವಹಿಸಲು ಹಾಜಿಗಳು ಅರಫಾದಲ್ಲಿ ಸಂಗಮಿಸುವ ದುಲ್ಹಜ್ ಒಂಬತ್ತರ ಮುಂಜಾನೆ ಹಳೆಯ ಕಿಸ್ವಾವನ್ನು ಕೆಳಗಿಳಿಸಿ ಹೊಸತನ್ನು ಹೊದಿಸಲಾಗುತ್ತದೆ.
ನಂತರ ಹಜ್‌ನ ಕಾರ್ಯಗಳು ಮುಗಿಯುವ ವರೆಗೆ ನಿಶ್ಚಿತ ಎತ್ತರಕ್ಕೆ ಕಿಸ್ವಾವನ್ನು ಎತ್ತಿಕಟ್ಟಲಾಗುತ್ತದೆ. ಪ್ರಕೃತಿದತ್ತವಾದ ರೇಷ್ಮೆಯಿಂದ ತಯಾರಿಸಲಾಗುವ ಕಿಸ್ವಾದ ತಯಾರಿಗೆ ಎರಡು ಕೋಟಿ ಸೌದಿ ರಿಯಾಲ್‌ಗಿಂತಲೂ ವೆಚ್ಚ ತಗಲುತ್ತದೆ.