janadhvani

Kannada Online News Paper

ತಮಿಳುನಾಡು ಮಾಜಿ ಸಿಎಂ ನಿಧನ: ಪ್ರಮುಖರಿಂದ ಸಂತಾಪ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರ ನಿಧನದ ಸುದ್ದಿ ಕೇಳಿ ನನಗೆ ತೀವ್ರ ಆಘಾತ ಉಂಟಾಗಿದೆ. ಇಡೀ ದೇಶವು ಒಬ್ಬ ಧೀಮಂತ ನಾಯಕನನ್ನು ಕಳೆದುಕೊಂಡಿದೆ.ನಾನು ಕರುಣಾನಿಧಿ ಅವರನ್ನು ಸುಮಾರು 5 ದಶಕಗಳಿಂದ ಬಹಳ ಹತ್ತಿರದಿಂದ ಬಲ್ಲೆ.  ಈ ದಿನ ನಾನು ನನ್ನ ಹಿರಿಯ ಅಣ್ಣನನ್ನು ಕಳೆದುಕೊಂಡಿದ್ದೀನಿ.  ನಾನು ಪ್ರಧಾನ ಮಂತ್ರಿ ಆಗಬೇಕಾದರೆ ಕರುಣಾನಿಧಿ ಅವರ ಪಾತ್ರ ಬಹಳ ದೊಡ್ಡದು. ಇಂದು ಇಡಿ ದೇಶಕ್ಕೆ ಮತ್ತು ವಯಕ್ತಿಕವಾಗಿ ನನಗೆ ತುಂಬಲಾಗದ ನಷ್ಟ ಉಂಟಾಗಿದೆ.  ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ.  ದೇವರು ಅವರ ಕುಟುಂಬಕ್ಕೆ ಮತ್ತು ಅವರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಪ್ರಾರ್ಥಿಸುವೆ.– ಎಚ್ಡಿ.ದೇವೇಗೌಡ  ಮಾಜಿ ಪ್ರಧಾನಿ


‘ಬದುಕಿರುವಾಗಲೇ ದಂತಕಥೆಯಂತಿದ್ದರು. ತಮ್ಮ ಜೀವಿತಾವಧಿ ಪೂರ್ಣ ತಮಿಳುನಾಡಿನ ಅಭಿವೃದ್ಧಿಗೆ ಶ್ರಮಿಸಿದ ಕರುಣಾನಿಧಿ ಅವರು ಪ್ರಾದೇಶಿಕ ಪಕ್ಷವನ್ನು ಸಧೃಢಗೊಳಿಸುವಲ್ಲಿ ಪ್ರದರ್ಶಿಸಿದ ಮುತ್ಸದ್ದಿತನ ವೈಶಿಷ್ಟ್ಯಪೂರ್ಣ. ಹಲವು ಬಾರಿ ಕರುಣಾನಿಧಿ ಅವರನ್ನು ಭೇಟಿ ಮಾಡಿದ್ದೆ. ಪ್ರಾದೇಶಿಕ ಪಕ್ಷಗಳ ಮಹತ್ವವನ್ನು ಪ್ರತಿ ಬಾರಿಯೂ ನನಗೆ ಮನವರಿಕೆ ಮಾಡಿಕೊಡುತ್ತಿದ್ದರು. ಹಿಂದುಳಿದ ವರ್ಗ ಹಾಗೂ ತುಳಿತಕ್ಕೊಳಗಾದವರ ಬಗ್ಗೆ ಅವರು ತೆಗೆದುಕೊಂಡ ಜನಪ್ರಿಯ ಯೋಜನೆಗಳನ್ನು ಇಂದು ದೇಶದ ವಿವಿಧ ರಾಜ್ಯಗಳಲ್ಲಿ ಅನುಕರಿಸುತ್ತಿವೆ. ಹೆಚ್.ಡಿ.ದೇವೇಗೌಡ ಅವರು ಪ್ರಧಾನ ಮಂತ್ರಿಗಳಾಗಿದ್ದ ಸಮ್ಮಿಶ್ರ ಸರ್ಕಾರದ ರಚನೆಗೆ ಕರುಣಾನಿಧಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಚಿತ್ರರಂಗದ ಮೂಲಕ ರಾಜಕೀಯಕ್ಕೆ ಬಂದು ತಮಿಳುನಾಡಿನ ಶೋಷಿತ ವರ್ಗಕ್ಕೆ ಗಟ್ಟಿದನಿ ನೀಡಿದ ಕರುಣಾನಿಧಿ, ರಾಜಕೀಯ ಸಿದ್ಧಾಂತ ನಮಗೆಲ್ಲರಿಗೂ ಮಾದರಿ. ಅವರ ನಿಧನದಿಂದ ಭಾರತದ ರಾಜಕೀಯ ರಂಗದಲ್ಲಿ ವೈಶಿಷ್ಟ್ಯಪೂರ್ಣ ವ್ಯಕ್ತಿತ್ವವೊಂದು ಕಣ್ಮರೆಯಾಗಿದೆ. ಅವರ ನಿಧನದಿಂದ ತಮಿಳುನಾಡು ಒಬ್ಬ ದಾರ್ಶನಿಕ ನಾಯಕನನ್ನು ಕಳೆದುಕೊಂಡಿದೆ.

ಹೆಚ್.ಡಿ. ಕುಮಾಸ್ವಾಮಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ


ಹದಿನಾಲ್ಕನೇ ವಯಸ್ಸಿಗೆ ರಾಜಕೀಯ ಪ್ರವೇಶಿಸಿ ಹದಿಮೂರು ಬಾರಿ ಸೋಲಿಲ್ಲದ ಸರದಾರನಂತೆ ಶಾಸಕರಾಗಿ ಆಯ್ಕೆಯಾಗಿ ಐದು ಬಾರಿ ಮುಖ್ಯಮಂತ್ರಿಯಾಗಿ, ರಾಜಕೀಯವೇ ಉಸಿರು ರಾಜಕೀಯವೇ ಜೀವನವೆಂದಿದ್ದ ಮುತ್ತುವೇಲು ಕರುಣಾನಿಧಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಇವರ ನಿಧನದಿಂದ ಕುಟುಂಬದ ಸದಸ್ಯರಿಗೆ ಹಾಗೂ ಅಭಿಮಾನಿಗಳಿಗೆ ದುಃಖ ವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ.

ಹೆಚ್.ಡಿ.ರೇವಣ್ಣ-ಲೋಕೋಪಯೋಗಿ ಸಚಿವರು,ಕರ್ನಾಟಕ ಸರ್ಕಾರ


ದ್ರಾವಿಡ ಚಳವಳಿಯ ನೇತಾರ, ಡಿ.ಎಂ.ಕೆ ಪಕ್ಷದ ಸಂಸ್ಥಾಪಕ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ನಿಧನ, ಸಮಾಜಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ತುಂಬಲಾರದ ನಷ್ಟ. ಈ ದಿನ ನಾವೆಲ್ಲ ಒಬ್ಬ ಧೀಮಂತ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ.ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ತುಂಬಲಿ.

ಜಿ.ಟಿ.ದೇವೇಗೌಡ-ಉನ್ನತ ಶಿಕ್ಷಣ ಸಚಿವರು ,ಕರ್ನಾಟಕ ಸರ್ಕಾರ


ಕರುಣಾನಿಧಿಯವರು ತಮಿಳುನಾಡಿನ ಸಮಕಾಲೀನ ರಾಜಕೀಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರಿಂದಾಗಿ ಸಮಾಜದ ಕೆಳವರ್ಗಗಳಿಗೆ ರಾಜಕೀಯ ದನಿ ಪ್ರಾಪ್ತವಾಯಿತು. ತಮಿಳುನಾಡಿನ ಅಸ್ಮಿತೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ರಾಷ್ಟ್ರ ರಾಜಕಾರಣದಲ್ಲೂ ಹಲವು ಸಂದರ್ಭಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಕರ್ನಾಟಕದೊಂದಿಗೆ ಸೌಹಾರ್ದ ಸಂಬಂಧ ಹೊಂದುವುದು ಅಗತ್ಯವೆಂದು ತಿಳಿದಿದ್ದ ಕರುಣಾನಿಧಿಯವರು ಹಲವು ವಿವಾದಗಳನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳುವ ಒಲವು ಹೊಂದಿದ್ದರು. ಅವರ ನಿಧನದಿಂದಾಗಿ ಮುತ್ಸದ್ದಿಯೊಬ್ಬರು ನಿರ್ಗಮಿಸಿದಂತಾಗಿದೆ. ರಾಷ್ಟ್ರ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳ ಶಕ್ತಿ ಏನೆಂಬುದನ್ನು ಕರುಣಾನಿಧಿಯವರು ತೋರಿಸಿ ಕೊಟ್ಟಿದ್ದರು. ಇದಕ್ಕಾಗಿ ಅವರು ಎಂದೆಂದೂ ನೆನಪಿನಲ್ಲಿ ಉಳಿಯುತ್ತಾರೆ.

ಆರ್ ವಿ ದೇಶಪಾಂಡೆ-ಸಚಿವರು ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರ


ಕಲೈಂಗರ್ ಶ್ರೀ ತಿರು ಕರುಣಾನಿಧಿಯವರ ಅಗಲಿಕೆ ದ್ರಾವಿಡ ಸಂಸ್ಕೃತಿಯ ಕಳಚಿದ ಪ್ರಮುಖ ತಳಹದಿ. ತಮಿಳುನಾಡು ಸಿನಿಮಾ ಪ್ರಂಪಂಚವನ್ನು ರಾಜಕಾರಣದ ಮಿಳಿತದೊಂದಿಗೆ ಬದುಕಿನ ಕೊನೆಯ ತನಕ ಜನಮಾನಸದಲ್ಲಿ ಪ್ರತಿಸ್ಟಾಪಿತ ನಾಯಕನಾಗಿದ್ದರು. ಮೇರು ತಾರೆಯರಾದ ಶಿವಾಜಿ ಗಣೇಶನ್, ಎಂ ಜಿ ಆರ್ ಮುಂತಾದ ನಾಯಕ ನಟರಿಗೆ ಸಾಹಿತ್ಯ ರಚಿಸಿ ತಮಿಳಿನ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸುವಂತಹ ಸಂಭಾಷಣೆ ರಚಿಸಿದ್ಥು ಅಜರಾಮರವಾಗಿದೆ.ಅಂತಹ ದ್ರಾವಿಡ ಮೇರು ಪರ್ವತ ಕರುಣಾನಿಧಿಯವರು.

ಅಡಗೂರು ವಿಶ್ವನಾಥ್ –ಜೆಡಿಎಸ್ ರಾಜ್ಯಾಧ್ಯಕ್ಷ

error: Content is protected !! Not allowed copy content from janadhvani.com