ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ರಾಸಾಯನಿಕ ದಾಳಿ ನಡೆಸುವುದಾಗಿ ರಾಷ್ಟ್ರೀಯ ಭದ್ರತಾ ದಳದ (ಎನ್‍ಎಸ್‍ಜಿ) ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ಬೆದರಿಕೆಯೊಡ್ಡಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಕಾಶೀನಾಥ್ ಮಂಡಲ್ ಎಂಬ ವ್ಯಕ್ತಿ ಈ ರೀತಿ ಬೆದರಿಕೆಯೊಡ್ಡಿದ್ದನು. ಆತನನ್ನು ಜುಲೈ 27 ರಂದು ಸೆಂಟ್ರಲ್ ಮುಂಬೈನ ಡಿ.ಬಿ ಮಾರ್ಗ್ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾಶೀನಾಥ್ ಶುಕ್ರವಾರ ನವದೆಹಲಿಯಲ್ಲಿರುವ ಎನ್ಎಸ್‍ಜಿ ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ಮೋದಿ ಮೇಲೆ ರಾಸಾಯನಿಕ ದಾಳಿ ನಡೆಸುವುದಾಗಿ ಬೆದರಿಕೆಯೊಡ್ಡಿದ್ದನು.
ಬೆದರಿಕೆ ಕರೆ ಬಂದ ಸಂಖ್ಯೆಯನ್ನು ಪತ್ತೆ ಹಚ್ಚಿದ ಎನ್‍ಎಸ್‍ಜಿ, ಮುಂಬೈ ಪೊಲೀಸರಿಗೆ ಮಾಹಿತಿ ನೀಡಿತ್ತು. ಜಾರ್ಖಂಡ್ ಮೂಲದ ಕಾಶೀನಾಥ್ ಸೂರತ್‍ಗೆ ಹೋಗುವ ರೈಲಿನಿಂದ ಇಳಿಯುವ ಹೊತ್ತಿಗೆ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ನನ್ನ ಗೆಳೆಯನೊಬ್ಬ ಜಾರ್ಖಂಡ್‍ನಲ್ಲಿ ನಡೆದ ನಕ್ಸಲ್ ದಾಳಿಯಲ್ಲಿ ಬಲಿಯಾಗಿದ್ದ. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿಯನ್ನು ಭೇಟಿಯಾಗಲು ಬಯಸಿದ್ದೆ ಎಂದು ಕಾಶೀನಾಥ್ ವಿಚಾರಣೆ ವೇಳೆ ಹೇಳಿದ್ದಾನೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಸೋಮವಾರದವರೆಗೆ ಬಂಧನ ವಿಧಿಸಿತ್ತು. ಇದಾದ ನಂತರ ಆತನನ್ನು ಮತ್ತೊಮ್ಮೆ ನ್ಯಾಯಾಲಕ್ಕೆ ಹಾಜರು ಪಡಿಸಲಾಗುವುದು ಎಂದು ಮೂಲಗಳು ಹೇಳಿವೆ.