janadhvani

Kannada Online News Paper

ಟ್ರಾಯ್‌ ಅಧ್ಯಕ್ಷರ ಮಾಹಿತಿ ಸೋರಿಕೆ; ಆಧಾರ್ ಇದ್ದರೆ ಪ್ರಕಟಿಸಿ- ಪ್ರಧಾನಿಗೆ ಹ್ಯಾಕರ್ ಸವಾಲು

ಹೊಸದಿಲ್ಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌) ದ ಅಧ್ಯಕ್ಷ ಆರ್‌ ಎಸ್‌ ಶರ್ಮಾ ಅವರ ವೈಯಕ್ತಿಕ ವಿವರಗಳನ್ನು ಸೋರಿಕೆ ಮಾಡಿದ ಹ್ಯಾಕರ್‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಧಾರ್‌ ಸಂಖ್ಯೆಯನ್ನು ಪ್ರಕಟಿಸುವಂತೆ ಸವಾಲು ಹಾಕಿದ್ದಾನೆ.ಫ್ರಾನ್ಸ್‌ ಮೂಲದ ಹ್ಯಾಕರ್‌ ಎನ್ನಲಾದ ಇಲಿಯಟ್‌ ಅಲ್ಡರ್‌ಸನ್‌ ಟ್ವೀಟರ್‌ ಖಾತೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿದ್ದು, ‘ನಿಮ್ಮ ಆಧಾರ್‌ ಸಂಖ್ಯೆಯನ್ನು ಪೋಸ್ಟ್‌ ಮಾಡುತ್ತೀರಾ?’ ಎಂದು ಪ್ರಶ್ನಿಸಿದ್ದಾನೆ. ಪ್ರಧಾನಿ ಮೋದಿ ಅವರನ್ನು ಅಣಕಿಸುವ ರೀತಿಯಲ್ಲಿ ಬ್ರಾಕೆಟ್‌ನಲ್ಲಿ ‘ಆಧಾರ್‌ ಕಾರ್ಡ್‌ ಹೊಂದಿದ್ದರೆ’ ಎಂಬುದನ್ನು ಸೇರಿಸಿದ್ದಾನೆ. ಈ ಸವಾಲಿಗೆ ಪ್ರಧಾನಿ ನರೇಂದ್ರ ಮೋದಿ, ಪ್ರಧಾನಿ ಕಚೇರಿ ಮತ್ತು ಕೇಂದ್ರ ಸಚಿವಾಲಯದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಆಧಾರ್‌ ಸುರಕ್ಷತೆ ಬಗ್ಗೆ ಸುಪ್ರೀಂ ಕೋರ್ಟ್‌ನ ಅಂಗಳದಲ್ಲಿ ಚರ್ಚೆಯಾಗುತ್ತಿದ್ದು, ಇದೀಗ ಆಧಾರ್‌ ಚಾಲೆಂಜ್‌ ಸ್ವರೂಪ ಪಡೆದಿದೆ. ಈ ಸವಾಲಲ್ಲಿ ಭಾಗಿಯಾಗಿದ್ದ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌) ದ ಅಧ್ಯಕ್ಷ ಆರ್‌ ಎಸ್‌ ಶರ್ಮಾ ಅವರ ವೈಯಕ್ತಿಕ ವಿವರಗಳು ಸೋರಿಕೆಯಾಗಿವೆ.

ಟ್ರಾಯ್‌ ಅಧ್ಯಕ್ಷ ಶರ್ಮಾ ಅವರು ಶನಿವಾರ ರಾತ್ರಿ ಟ್ವೀಟರ್‌ನಲ್ಲಿ ತಮ್ಮ ಆಧಾರ್‌ ಸಂಖ್ಯೆ ಹಂಚಿಕೊಂಡಿದ್ದರು. ಕೆಲವೇ ನಿಮಿಷಗಳಲ್ಲಿ ಫ್ರಾನ್ಸ್‌ ಮೂಲದ ಹ್ಯಾಕರ್‌ ಎಂದು ಗುರುತಿಸಿಕೊಂಡಿರುವ ಇಲಿಯಟ್‌ ಅಲ್ಡರ್‌ಸನ್‌ ಎಂಬ ಹ್ಯಾಕರ್‌ ಶರ್ಮಾ ಅವರ ವೈಯಕ್ತಿಕ ಮಾಹಿತಿಯನ್ನು ಸರಣಿ ಟ್ವೀಟ್‌ಗಳ ಮೂಲಕ ಸೋರಿಕೆ ಮಾಡಿದ್ದಾನೆ.

ಶರ್ಮಾ ಟ್ವೀಟರ್‌ನಲ್ಲಿ ಆಧಾರ್‌ ಸಂಖ್ಯೆಯನ್ನು ಪೋಸ್ಟ್‌ ಮಾಡಿ, ‘ಇದರಿಂದ ತಮ್ಮ ವೈಯಕ್ತಿಕ ಮಾಹಿತಿಯನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತೀರಿ? ಒಂದೊಳ್ಳೆ ಉದಾಹರಣೆ ಕೊಡಿ’ ಎಂದು ಸವಾಲು ಹಾಕಿದ್ದರು. ಅಂದರೆ ಆಧಾರ್‌ ಸಂಖ್ಯೆಯಿಂದ ವೈಯಕ್ತಿಕ ಮಾಹಿತಿ ಸೋರಿಕೆಯಾಗುವುದಿಲ್ಲ ಎಂದು ಪ್ರತಿಪಾದಿಸುವ ಸಲುವಾಗಿ ಈ ಸವಾಲನ್ನು ಒಡ್ಡಿದ್ದರು.

ಆಧಾರ್‌ ಚಾಲೆಂಜ್‌ ಹಾಕಿದ ಕೆಲವೇ ನಿಮಿಷಗಳಲ್ಲಿ ಹ್ಯಾಕರ್‌ ಶರ್ಮಾ ಅವರ ಪ್ಯಾನ್‌ ಕಾರ್ಡ್‌ ಸಂಖ್ಯೆ, ಮತ್ತೊಂದು ಮೊಬೈಲ್‌ ಸಂಖ್ಯೆ, ಇಮೇಲ್‌ ಐಡಿ, ಬಳಕೆ ಮಾಡುತ್ತಿರುವ ಮೊಬೈಲ್‌ ಮಾಹಿತಿಗಳ ಜತೆ ವಾಟ್ಸ್‌ಆ್ಯಪ್‌ನಲ್ಲಿ ಹಾಕಿಕೊಂಡಿದ್ದ ಪ್ರೊಫೈಲ್‌ ಚಿತ್ರ ಸಮೇತ ಬಹಿರಂಗಗೊಳಿಸಿದ್ದಾನೆ. ಟ್ರಾಯ್‌ ಅಧ್ಯಕ್ಷರ ಕೇವಲ ಆಧಾರ್‌ ಸಂಖ್ಯೆಯಿಂದ ಇಷ್ಟೆಲ್ಲಾ ವೈಯಕ್ತಿಕ ಮಾಹಿತಿ ಸೋರಿಕೆಯಾದ ಹಿನ್ನೆಲೆ ಸಾಮಾಜಿಕ ತಾಣಗಳಲ್ಲಿ ಆಧಾರ್‌ ಸುರಕ್ಷತೆ ಬಗ್ಗೆ ಮತ್ತೆ ಚರ್ಚೆ ಮುನ್ನೆಲೆಗೆ ಬಂದಿದೆ.

ಆಧಾರ್‌ ಕುರಿತಾದ ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭ ಶರ್ಮಾ ಅವರು ಆಧಾರ್‌ನಿಂದ ವೈಯಕ್ತಿಕ ಮಾಹಿತಿಗೆ ತೊಂದರೆಯಾಗುವುದಿಲ್ಲ. ಅತ್ಯಂತ ಸುರಕ್ಷಿತ ಎಂದು ಹೇಳಿದ್ದರು. ಈ ಹಿನ್ನೆಲೆ @kingslyj ಎಂಬ ಹೆಸರಿನ ಟ್ವೀಟರ್‌ ಬಳಕೆದಾರನೊಬ್ಬ ‘ಆಧಾರ್‌ ಸುರಕ್ಷತೆ ಬಗ್ಗೆ ಅಷ್ಟೊಂದು ನಂಬಿಕೆಯಿದ್ದರೆ ನಿಮ್ಮ ಆಧಾರ್‌ ಸಂಖ್ಯೆಯನ್ನು ಪೋಸ್ಟ್‌ ಮಾಡಿ’ ಎಂದು ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶರ್ಮಾ ತಮ್ಮ ಆಧಾರ್‌ ಸಂಖ್ಯೆ ಪ್ರಕಟಿಸಿದ್ದರು.

ಒಂದಾದ ನಂತರ ಒಂದೊಂದು ವೈಯಕ್ತಿಕ ಮಾಹಿತಿ ಸೋರಿಕೆ ಮಾಡುತ್ತಿದ್ದ ಇಲಿಯಟ್‌ ಕೊನೆಗೆ ‘ನಿಮ್ಮ ವೈಯಕ್ತಿಕ ವಿಳಾಸ, ಜನ್ಮದಿನಾಂಕ, ಪರ್ಯಾ ಮೊಬೈಲ್‌ ಸಂಖ್ಯೆ ಇತ್ಯಾದಿ ವಿವರಗಳು ಸಾರ್ವಜನಿಕಗೊಂಡಿವೆ. ಇಲ್ಲಿಗೆ ಇದನ್ನು ನಿಲ್ಲಿಸುತ್ತಿದ್ದೇನೆ. ಆಧಾರ್‌ ಸಂಖ್ಯೆ ಸಾರ್ವಜನಿಕಗೊಳಿಸುವುದು ಒಳ್ಳೆಯದಲ್ಲ ಎಂಬುದು ನಿಮಗೆ ಈಗ ಅರ್ಥವಾಗಿದೆ ಎಂದು ನಂಬುತ್ತೇನೆ’ ಎಂದಿರುವ ಇಲಿಯಟ್‌, ನಾನು ಆಧಾರ್‌ ವಿರೋಧಿಯಲ್ಲ. ಆದರೆ ಆಧಾರ್‌ ಹ್ಯಾಕ್‌ ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೊಳ್ಳುವವರ ವಿರೋಧಿ ಎಂದು ವಿವರಿಸಿದ್ದಾನೆ.

error: Content is protected !! Not allowed copy content from janadhvani.com