ಸುಳ್ಯ: ಮಾದಕ ಮುಕ್ತ ಸಮಾಜ ನಿರ್ಮಾಣ, ಯುವಜನರಲ್ಲಿ ಜಾಗೃತಿ, ಸೌಹಾರ್ದತೆ ಹಾಗೂ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ನಿರಂತರ ಸೇವೆಯನ್ನು ಗುರುತಿಸಿ ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಇಕ್ಬಾಲ್ ಬಾಳಿಲ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಸಾಮಾಜಿಕ ಸೇವೆ ಹಾಗೂ ಸಂಘಟನಾತ್ಮಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಇಕ್ಬಾಲ್ ಬಾಳಿಲ ಅವರು, ರಾಜ್ಯದ ವಿವಿಧ ಭಾಗಗಳಲ್ಲಿ ಸೌಹಾರ್ದತೆ, ಯುವಜಾಗೃತಿ ಮತ್ತು ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಭಾಷಣ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ತಮ್ಮ ಪರಿಣಾಮಕಾರಿ ಮಾತುಗಾರಿಕೆ ಮತ್ತು ಸಂಘಟನಾ ಸಾಮರ್ಥ್ಯದ ಮೂಲಕ ಯುವಜನರಲ್ಲಿ ಸಾಮಾಜಿಕ ಜವಾಬ್ದಾರಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ನಿವಾಸಿಯಾಗಿರುವ ಇವರು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸ್ವಗ್ರಾಮದಲ್ಲೇ ಪೂರೈಸಿ, ಉನ್ನತ ಶಿಕ್ಷಣವನ್ನು ಮಂಗಳೂರಿನಲ್ಲಿ ಮುಗಿಸಿದ್ದಾರೆ. ಬಳಿಕ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಹಿತ್ಯಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.
ಧಾರ್ಮಿಕ ಸಂಘಟನೆಯಾದ SKSSF ಕರ್ನಾಟಕ ರಾಜ್ಯ ಉಪಾಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಭಾವೈಕ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿ ಹಾಗೂ ರಾಜ್ಯಮಟ್ಟದ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, Anti Drug Council of India ಸಂಸ್ಥೆಯ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಮಾದಕ ಮುಕ್ತ ಸಮಾಜ ನಿರ್ಮಾಣವನ್ನು ತಮ್ಮ ಸೇವೆಯ ಪ್ರಮುಖ ಗುರಿಯನ್ನಾಗಿಸಿಕೊಂಡಿರುವ ಇವರು, ಮಂಗಳೂರಿನಲ್ಲಿ ಮಾದಕ ವ್ಯಸನದಿಂದ ಬಳಲುತ್ತಿರುವವರಿಗೆ ಮಾರ್ಗದರ್ಶನ ಮತ್ತು ನೆರವು ನೀಡುವ ಉದ್ದೇಶದಿಂದ ಕೌನ್ಸೆಲಿಂಗ್ ಕೇಂದ್ರವನ್ನು ಆರಂಭಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇವಲ ಜಾಗೃತಿ ಭಾಷಣಗಳಿಗೆ ಸೀಮಿತವಾಗದೆ, ವ್ಯಸನಕ್ಕೆ ಒಳಗಾದವರೊಂದಿಗೆ ನೇರ ಸಂಪರ್ಕ ಬೆಳೆಸಿ, ಅವರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಕೌನ್ಸೆಲಿಂಗ್ ಹಾಗೂ ಮಾರ್ಗದರ್ಶನದ ಮೂಲಕ ವ್ಯಸನದ ಸುಳಿಯಿಂದ ಹೊರಬರಲು ಹಲವರಿಗೆ ನೆರವಾಗಿದ್ದಾರೆ. ವ್ಯಸನಿಗಳಲ್ಲಿ ಆತ್ಮವಿಶ್ವಾಸ ತುಂಬಿ ಅವರನ್ನು ಮತ್ತೆ ಸಹಜ ಜೀವನದತ್ತ ಮುನ್ನಡೆಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದಲ್ಲದೆ, ಮಾದಕ ವ್ಯಸನದ ಕುರಿತು ಆಳವಾದ ಅಧ್ಯಯನ ನಡೆಸಿ, ಅದರ ದುಷ್ಪರಿಣಾಮಗಳು ಹಾಗೂ ಆಧ್ಯಾತ್ಮಿಕ ಚಿಂತನೆಗಳನ್ನು ಒಳಗೊಂಡ ಸುಮಾರು 300 ಪುಟಗಳ ಆಧ್ಯಾತ್ಮಿಕ ಪುಸ್ತಕವೊಂದನ್ನು ರಚಿಸುವ ಮೂಲಕ ರಾಜ್ಯಮಟ್ಟದಲ್ಲಿಯೂ ಗಮನ ಸೆಳೆದಿದ್ದಾರೆ. ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ಜೊತೆಗೆ ಯುವಜನರನ್ನು ಆಧ್ಯಾತ್ಮಿಕ ಮೌಲ್ಯಗಳು ಮತ್ತು ಉತ್ತಮ ಜೀವನಶೈಲಿಯತ್ತ ಪ್ರೇರೇಪಿಸುವ ಉದ್ದೇಶದಿಂದ ರೂಪಿಸಲಾದ ಈ ಕೃತಿ ವಿಶೇಷ ಗಮನ ಸೆಳೆದಿದೆ. ಈ ಪ್ರಯತ್ನವನ್ನು ಮುಖ್ಯಮಂತ್ರಿಗಳೂ ಮೆಚ್ಚಿ ಗೌರವಿಸಿರುವುದು ಇವರ ಸಾಮಾಜಿಕ ಕಳಕಳಿಗೆ ಮತ್ತೊಂದು ಮನ್ನಣೆಯಾಗಿದೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಪೋಷಕರಿಗೂ ಈ ವಿಚಾರದಲ್ಲಿ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಮಾದಕ ವ್ಯಸನವು ಕೇವಲ ವ್ಯಕ್ತಿಯ ಸಮಸ್ಯೆಯಲ್ಲ, ಅದು ಕುಟುಂಬ ಮತ್ತು ಸಮಾಜದ ಮೇಲೂ ಪರಿಣಾಮ ಬೀರುವ ಗಂಭೀರ ಸವಾಲು ಎಂಬ ಸಂದೇಶವನ್ನು ತಮ್ಮ ಕಾರ್ಯಕ್ರಮಗಳ ಮೂಲಕ ಸಾರುತ್ತಿದ್ದಾರೆ.
ಸಾಮಾಜಿಕ ಕಳಕಳಿ, ಸೌಹಾರ್ದತೆಯ ಸಂದೇಶ, ಯುವಜನರ ಮಾರ್ಗದರ್ಶನ, ಸಾಹಿತ್ಯಿಕ ಕೊಡುಗೆ ಹಾಗೂ ಮಾದಕ ಮುಕ್ತ ಸಮಾಜಕ್ಕಾಗಿ ಅವರು ಸಲ್ಲಿಸುತ್ತಿರುವ ಬಹುಮುಖಿ ಸೇವೆಯನ್ನು ಪರಿಗಣಿಸಿ ಈ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಲಭಿಸಿರುವುದಕ್ಕೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.















ಇನ್ನಷ್ಟು ಸುದ್ದಿಗಳು
ಹಾಲು–ಮೊಸರಿನ ದರ ಏರಿಕೆ: ಪರ್ಯಾಯದ ಹೆಸರಿನಲ್ಲಿ ಕಲಬೆರಕೆಯ ಅಪಾಯ
ಅಲ್ ಮದೀನದಲ್ಲಿ ವಿಜೃಂಭಿಸಿದ ವಿದ್ಯಾರ್ಥಿಗಳ ಸಾಹಿತ್ಯ–ಸಾಂಸ್ಕೃತಿಕ ಸಂಗಮ ‘ಗುಲ್ಶನ್’
ಮೀರಾಸ್ ಎಜು ಗೋಲ್ – ನೂತನ ಕಾರ್ಯನಿರ್ವಾಹಕ ಸಮಿತಿ ಅಸ್ತಿತ್ವಕ್ಕೆ
ಜೈಲು ಕಂಬಿಗಳ ಹಿಂದೆ ನರಳುವ ಜೀವಗಳು: ಕರಾಳ ಮಾದಕವಸ್ತು ಜಾಲದ ಕ್ರೂರ ಮುಖ
ಯೆನೆಪೋಯ ವಿಶ್ವವಿದ್ಯಾಲಯದಿಂದ ಕಾಂತಪುರಂ ಉಸ್ತಾದರಿಗೆ ಗೌರವ ಡಾಕ್ಟರೇಟ್
ಇಂದು ಕಾಪುವಿನಲ್ಲಿ ಐತಿಹಾಸಿಕ ಸಮಸ್ತ ತಾತ್ವಿಕ ಸಮಾವೇಶ- ಎಸ್ಸೆಸ್ಸೆಫ್ ಕಾಪು ಡಿವಿಷನ್ ಯಶಸ್ವಿಗೆ ಕರೆ
ರಾಷ್ಟ್ರಮಟ್ಟದ ಹ್ಯಾಕಥಾನ್ನಲ್ಲಿ ಅಫ್ನಾಜ್ಗೆ ದ್ವಿತೀಯ ಸ್ಥಾನ
ಬಿಳಿ ಬಣ್ಣದ ಮದುವೆ ಉಡುಗೆಯನ್ನು ಹೊದಿಸಿ ಅಸ್ಸಾ ರಮ್ಸಿಗೆ ಕಣ್ಣೀರಿನ ವಿದಾಯ
‘ಪೈಲಟ್ ಸ್ಮಿತ್ ಮಚ್ಚಾರ್ ಯುಎಇಯ ಹೆಮ್ಮೆ’ ; ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ ಶೈಖ್ ಹಮ್ದಾನ್
ಮಂಗಳೂರಿನ MRPL ಘಟಕದಲ್ಲಿ ಭಾರೀ ಸ್ಫೋಟ: ದಟ್ಟ ಹೊಗೆ, ಸುತ್ತಮುತ್ತಲಿನ ಮನೆಗಳಿಗೆ ಹಾನಿ- ಹಲವರಿಗೆ ಗಾಯ