janadhvani

Kannada Online News Paper

ವಿಮಾನ ನಿಲ್ದಾಣದ ಮೇಲೆ ದಾಳಿ: ಉಮ್ರಾಗೆ ಬಂದಿದ್ದ ಬಾಂಗ್ಲಾದೇಶದ ಶಿಕ್ಷಕನಿಗೆ ದಾರುಣ ಅಂತ್ಯ

ಮಕ್ಕಾಗೆ ತೆರಳುವ ಕನೆಕ್ಟಿಂಗ್ ವಿಮಾನಕ್ಕಾಗಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಈ ದಾಳಿ ಸಂಭವಿಸಿದೆ

ರಿಯಾದ್: ರಿಯಾದ್ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಹೂತಿ ದಾಳಿಯಲ್ಲಿ ಉಮ್‌ರಾ ನಿರ್ವಹಿಸಲು ಬಂದಿದ್ದ ಬಾಂಗ್ಲಾದೇಶದ ಶಿಕ್ಷಕನೊಬ್ಬರು ದುರ್ಮರಣಕ್ಕೀಡಾಗಿದ್ದಾರೆ.

ಢಾಕಾ ಸಮೀಪದ ಜಾಮಿಯಾ ಅರೇಬಿಯಾ ದಾರುಲ್ ಉಲೂಮ್ ಮದ್ರಸಾದ ಉಪನಿರ್ದೇಶಕರಾಗಿರುವ 35 ವರ್ಷದ ಹಫೀಜ್ ಮುಫ್ತಿ ಮೊಹಮ್ಮದ್ ನಸ್ರುಲ್ಲಾ ಮೃತಪಟ್ಟವರು. ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ದಾಳಿಯಲ್ಲಿ ಗಾಯಗೊಂಡಿದ್ದ ಅವರು ಕೊನೆಯುಸಿರೆಳೆದಿದ್ದಾರೆ.

ಎರಡು ವಾರಗಳ ಉಮ್‌ರಾ ಯಾತ್ರೆಗಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ತಮ್ಮ ಸಂಸ್ಥೆಯ 45 ಸದಸ್ಯರ ತಂಡದೊಂದಿಗೆ ಅವರು ಸೌದಿ ಅರೇಬಿಯಾಕ್ಕೆ ಬಂದಿದ್ದರು. ಮಕ್ಕಾಗೆ ತೆರಳುವ ಕನೆಕ್ಟಿಂಗ್ ವಿಮಾನಕ್ಕಾಗಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಈ ದಾಳಿ ಸಂಭವಿಸಿದೆ. ಈ ದಾಳಿಯಲ್ಲಿ ಅವರ ತಂಡದ ಒಂಬತ್ತು ಮಂದಿಗೆ ಗಾಯಗಳಾಗಿವೆ. ಅದರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಮೃತರಿಗೆ ಪತ್ನಿ ಹಾಗೂ ಏಳು, ಐದು ಮತ್ತು ಎರಡು ವರ್ಷ ವಯಸ್ಸಿನ ಮೂವರು ಮಕ್ಕಳಿದ್ದಾರೆ. ಪವಿತ್ರ ಭೂಮಿಗೆ ತೆರಳಿ ಉಮ್‌ರಾ ನಿರ್ವಹಿಸುವ ಪ್ರಯಾಣದ ಮಧ್ಯೆ ಸಂಭವಿಸಿದ ಈ ದುರಂತದಿಂದ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಹೋದ್ಯೋಗಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ.

ಮತ್ತೊಂದೆಡೆ, ರಿಯಾದ್ ವಿಮಾನ ನಿಲ್ದಾಣದ ಮೇಲಿನ ದಾಳಿಯನ್ನು ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ಗಾಯಗೊಂಡವರಿಗೆ ಅಗತ್ಯವಿರುವ ಚಿಕಿತ್ಸೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ದೊರೆಯುವುದನ್ನು ಖಚಿತಪಡಿಸಿಕೊಳ್ಳಲು ರಿಯಾದ್‌ನಲ್ಲಿರುವ ಬಾಂಗ್ಲಾದೇಶದ ರಾಯಭಾರ ಕಚೇರಿಯು ತುರ್ತು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಇದನ್ನೂ ಓದಿರಿ...