ಬಾರಾಮತಿ, ಜನವರಿ 28: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡ ಪರಿಣಾಮ ವಿಮಾನದಲ್ಲಿದ್ದ ಎಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ.
ಬಾರಾಮತಿ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ಗೆ ಪ್ರಯತ್ನಿಸುತ್ತಿದ್ದಾಗ ಅವಘಡ ಸಂಭವಿಸಿದೆ. ಅಪಘಾತದ ತೀವ್ರತೆಗೆ ಸ್ಥಳದಲ್ಲಿ ಭಾರಿ ಪ್ರಮಾಣದ ಬೆಂಕಿ ಮತ್ತು ದಟ್ಟವಾದ ಹೊಗೆ ಆವರಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ಮತ್ತು ತುರ್ತು ಸೇವಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಅಜಿತ್ ಪವಾರ್ ಅವರು ಮುಂಬೈನಿಂದ ತಮ್ಮ ಸ್ವಕ್ಷೇತ್ರವಾದ ಬಾರಾಮತಿಗೆ ನಾಲ್ಕು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲು ಪ್ರಯಾಣಿಸುತ್ತಿದ್ದರು.
ಭಾರತದಲ್ಲಿ ವಾಯು ದುರಂತಗಳಲ್ಲಿ ಪ್ರಾಣ ಕಳೆದುಕೊಂಡ ರಾಜಕಾರಣಿಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ವೈ.ಎಸ್.ಆರ್, ದೋರ್ಜಿ ಖಂಡು, ಓಂ ಪ್ರಕಾಶ್ ಜಿಂದಾಲ್, ಮಾಧವರಾವ್ ಸಿಂಧಿಯಾ, ಸಂಜಯ್ ಗಾಂಧಿ ಸೇರಿದಂತೆ ಹಲವು ಪ್ರಮುಖ ನಾಯಕರು ಇಂತಹ ದುರಂತಗಳಿಗೆ ಬಲಿಯಾಗಿದ್ದಾರೆ. ಅವರ ರಾಜಕೀಯ ಪ್ರಯಾಣ ಇಂತಹ ದುರ್ಘಟನೆಗಳಿಂದ ಕೊನೆಗೊಂಡಿದೆ.
ವಿಜಯ್ ರೂಪಾನಿ (2025)
ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಜೂನ್ 12, 2025 ರಂದು ಅಹಮದಾಬಾದ್ನಲ್ಲಿ ನಡೆದ ದುರಂತ ವಿಮಾನ ಅಪಘಾತದಲ್ಲಿ ನಿಧನರಾಗಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಲಂಡನ್ಗೆ ತೆರಳುತ್ತಿದ್ದ ವಿಮಾನ ಪತನಗೊಂಡಿತ್ತು ಅದರಲ್ಲಿ ರೂಪಾನಿ ಇದ್ದರು. ವಿಮಾನದಲ್ಲಿದ್ದ 242 ಜನರಲ್ಲಿ 241 ಜನರು ಸಾವನ್ನಪ್ಪಿದರು.
ದೋರ್ಜಿ ಖಂಡು (2011)
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ದೋರ್ಜಿ ಖಂಡು ಮತ್ತು ಇತರ ನಾಲ್ವರನ್ನು ಏಪ್ರಿಲ್ 30, 2011 ರಂದು ತವಾಂಗ್ನಿಂದ ಇಟಾನಗರಕ್ಕೆ ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ರಾಜ್ಯದ ಪಶ್ಚಿಮ ಕಾಮೆಂಗ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು.
ವೈ.ಎಸ್. ರೆಡ್ಡಿ (2009)
ಆಂಧ್ರಪ್ರದೇಶದ ಆಗಿನ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ (2009), ವೈ.ಎಸ್.ಆರ್ ಎಂದೇ ಜನಪ್ರಿಯರಾಗಿದ್ದರು, ಸೆಪ್ಟೆಂಬರ್ 2, 2009 ರಂದು ಅವರ ಬೆಲ್ 430 ಹೆಲಿಕಾಪ್ಟರ್ ಕೆಟ್ಟ ಹವಾಮಾನದಿಂದಾಗಿ ದಟ್ಟವಾದ ನಲ್ಲಮಲ ಕಾಡಿನಲ್ಲಿ ಅಪಘಾತಕ್ಕೀಡಾಗಿ ನಿಧನರಾದರು.
OP ಜಿಂದಾಲ್ ಮತ್ತು ಸುರೇಂದರ್ ಸಿಂಗ್ (2005)
2005 ರಲ್ಲಿ ಕೈಗಾರಿಕೋದ್ಯಮಿ ಮತ್ತು ಹರಿಯಾಣ ಸಚಿವ ಓಂ ಪ್ರಕಾಶ್ ಜಿಂದಾಲ್ ಅವರು ಕೃಷಿ ಸಚಿವ ಸುರೇಂದರ್ ಸಿಂಗ್ ಅವರೊಂದಿಗೆ ಹೆಲಿಕಾಪ್ಟರ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರು. ಅವರ ಹೆಲಿಕಾಪ್ಟರ್ ದೆಹಲಿಯಿಂದ ಚಂಡೀಗಢಕ್ಕೆ ತೆರಳುತ್ತಿದ್ದಾಗ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಅಪಘಾತಕ್ಕೀಡಾಯಿತು.
ಕೆ.ಎಸ್. ಸೌಮ್ಯ (2004)
ದಕ್ಷಿಣ ಭಾರತದ ಖ್ಯಾತ ನಟಿ ಕೆ.ಎಸ್. ಸೌಮ್ಯ, ಸೌಂದರ್ಯ ಎಂದೇ ಜನಪ್ರಿಯರಾಗಿದ್ದರು. ಅವರು ಏಪ್ರಿಲ್ 17, 2004 ರಂದು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು. ಸೂರ್ಯವಂಶಂ ಚಿತ್ರದ ನಟಿ ಬೆಂಗಳೂರಿನಿಂದ ಕರೀಂನಗರಕ್ಕೆ ತನ್ನ ಸಹೋದರನೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.
ಸಿಪ್ರಿಯನ್ ಸಂಗ್ಮಾ (2004)
2004 ರ ಸೆಪ್ಟೆಂಬರ್ 22 ರಂದು ರಾಜ್ಯ ರಾಜಧಾನಿಯಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಬಾರಾಪಾನಿ ಸರೋವರದ ಬಳಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಮೇಘಾಲಯದ ಗ್ರಾಮೀಣಾಭಿವೃದ್ಧಿ ಸಚಿವ ಸಿಪ್ರಿಯನ್ ಸಂಗ್ಮಾ ಮತ್ತು ಇತರ ಒಂಬತ್ತು ಮಂದಿ ಪವನ್ ಹನ್ಸ್ ಹೆಲಿಕಾಪ್ಟರ್ನಲ್ಲಿ ಗುವಾಹಟಿಯಿಂದ ಶಿಲ್ಲಾಂಗ್ಗೆ ಹೋಗುತ್ತಿದ್ದಾಗ ಸಾವನ್ನಪ್ಪಿದ್ದರು.
ಜಿಎಂಸಿ ಬಾಲಯೋಗಿ (2002)
ಲೋಕಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಜಿಎಂಸಿ ಬಾಲಯೋಗಿ ಅವರನ್ನು ಮಾರ್ಚ್ 3, 2002 ರಂದು ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಿಂದ ಕರೆದೊಯ್ಯುತ್ತಿದ್ದ ಖಾಸಗಿ ಹೆಲಿಕಾಪ್ಟರ್ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕೈಕಲೂರು ಬಳಿಯ ಕೊಳಕ್ಕೆ ಅಪ್ಪಳಿಸಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು.
ಮಾಧವರಾವ್ ಸಿಂಧಿಯಾ (2001)
ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ನಾಗರಿಕ ವಿಮಾನಯಾನ ಸಚಿವರಾಗಿದ್ದ ಮಾಧವರಾವ್ ಸಿಂಧಿಯಾ ಅವರು ಸೆಪ್ಟೆಂಬರ್ 30, 2001 ರಂದು ಕಾನ್ಪುರದಲ್ಲಿ ರಾಜಕೀಯ ರ್ಯಾಲಿಯೊಂದರ ಮಾರ್ಗಮಧ್ಯೆ ಸಂಭವಿಸಿದ ವಿಮಾನ ಅಪಘಾತದಲ್ಲಿ ನಿಧನರಾದರು. ಉತ್ತರ ಪ್ರದೇಶದ ಮಣಿಪುರಿ ಬಳಿ ಪ್ರತಿಕೂಲ ಹವಾಮಾನದಿಂದಾಗಿ 10 ಆಸನಗಳ ಖಾಸಗಿ ವಿಮಾನ ಅಪಘಾತಕ್ಕೀಡಾಗಿತ್ತು.
ಸಂಜಯ್ ಗಾಂಧಿ (1980)
ಕಾಂಗ್ರೆಸ್ ನಾಯಕ ಮತ್ತು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ್ ಗಾಂಧಿ, ಜೂನ್ 23, 1980 ರಂದು ನಡೆದ ದುರಂತ ಅಪಘಾತದಲ್ಲಿ ನಿಧನರಾದರು. ಸಫ್ದರ್ಜಂಗ್ ವಿಮಾನ ನಿಲ್ದಾಣದ ಬಳಿ ದೆಹಲಿ ಫ್ಲೈಯಿಂಗ್ ಕ್ಲಬ್ ವಿಮಾನದಲ್ಲಿ ವೈಮಾನಿಕ ಸಾಹಸ ಮಾಡಲು ಪ್ರಯತ್ನಿಸುತ್ತಿದ್ದಾಗ, ವಿಮಾನವು ನಿಯಂತ್ರಣ ತಪ್ಪಿ ಪತನಗೊಂಡಿತ್ತು.


