ಜಿದ್ದಾ: ಉಮ್ರಾ ನಿರ್ವಹಿಸಲು ಆಗಮಿಸುವ ಯಾತ್ರಿಕರಿಗೆ ಮಾರ್ಗದರ್ಶನ ನೀಡಲು ಹಜ್ ಮತ್ತು ಉಮ್ರಾ ಸಚಿವಾಲಯವು ಹೊಸ ಅಭಿಯಾನವನ್ನು ಪ್ರಾರಂಭಿಸಿದೆ. “ಕಮಿಂಗ್ ಟು ಉಮ್ರಾ” ಎಂಬ ಶೀರ್ಷಿಕೆಯ ಈ ಅಭಿಯಾನವು ಉಮ್ರಾ ಯಾತ್ರಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ನಡವಳಿಕೆಯ ಮಾರ್ಗಸೂಚಿಗಳ ಕುರಿತು ಮಾಹಿತಿಯನ್ನು ಒದಗಿಸುವ ಮೂಲಕ ಯಾತ್ರಿಕರಿಗೆ ಸೇವೆಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಸೌದಿ ವಿಷನ್ 2030 ರ ಗುರಿಗಳಿಗೆ ಅನುಗುಣವಾಗಿದೆ ಈ ಉಪಕ್ರಮ. ರಂಜಾನ್‌ನ ಗರಿಷ್ಠ ಋತುವಿಗೆ ಸಮಗ್ರ ಸಿದ್ಧತೆಯ ಭಾಗವಾಗಿ ಉಮ್ರಾ ಸೇವೆಗಳ ಗುಣಮಟ್ಟವನ್ನು ಸುಧಾರಿಸುವುದು ಯೋಜನೆಯ ಉದ್ದೇಶವಾಗಿದೆ.
ಪ್ರಸ್ತುತ ಹಿಜ್ರಿ ವರ್ಷದ ಆರಂಭದಿಂದ 1.18 ಕೋಟಿಗೂ ಹೆಚ್ಚು ಅಂತರರಾಷ್ಟ್ರೀಯ ಉಮ್ರಾ ಯಾತ್ರಿಕರು ಆಗಮಿಸಿದ್ದಾರೆ ಎಂದು ಅಂಕಿಅಂಶಗಳು ಸೂಚಿಸುತ್ತವೆ. ರಂಜಾನ್ ಅಂತ್ಯದವರೆಗೆ ನಡೆಯುವ ಈ ಅಭಿಯಾನವು ಉಮ್ರಾ ಪ್ರಯಾಣದ ಎಲ್ಲಾ ಹಂತಗಳಿಗೂ ಪ್ರಯೋಜನಕಾರಿಯಾಗಿದೆ. ಉಮ್ರಾ ನಿರ್ವಹಿಸಲು ಯೋಜಿಸುವ ಹಂತದಿಂದ ಹಿಡಿದು ಮನೆಗೆ ಹಿಂದಿರುಗುವವರೆಗೆ ಉಮ್ರಾ ಯಾತ್ರಿಕರೊಂದಿಗೆ ಡಿಜಿಟಲ್ ಮತ್ತು ಆನ್-ಸೈಟ್ ಸಂವಹನ ಸಾಧನಗಳನ್ನು ಬಳಸಿಕೊಂಡು ಈ ಅಭಿಯಾನವನ್ನು ಕಾರ್ಯಗತಗೊಳಿಸಲಾಗುತ್ತದೆ.
ಪ್ರವೇಶ ದ್ವಾರಗಳು, ವಿಮಾನ ನಿಲ್ದಾಣಗಳು, ಸಾರಿಗೆ ಕೇಂದ್ರಗಳು, ವಸತಿ ಸೌಕರ್ಯಗಳು, ಗಮ್ಯಸ್ಥಾನಗಳು ಮತ್ತು ಎರಡು ಹರಂಗಳು ಸೇರಿದಂತೆ 18 ಕ್ಕೂ ಹೆಚ್ಚು ಪ್ರಮುಖ ಸ್ಥಳಗಳಲ್ಲಿ ಆನ್‌ಸೈಟ್ ಸೇವೆಗಳು ಲಭ್ಯವಿರುತ್ತವೆ. ಜಾಗೃತಿ ಪರದೆಗಳು, ರಸ್ತೆ ಚಿಹ್ನೆ ಫಲಕಗಳು ಮತ್ತು ಪಠ್ಯ ಸಂದೇಶಗಳಂತಹ ಸೇವೆಗಳೊಂದಿಗೆ ಈ ಅಭಿಯಾನವು ಆರು ಭಾಷೆಗಳಲ್ಲಿ ಡಿಜಿಟಲ್-ಮಾಧ್ಯಮ ಸಂಪರ್ಕದ ಮೂಲಕ ಜಾಗತಿಕ ಪ್ರಯಾಣಿಕರನ್ನು ತಲುಪಲಿದೆ.


