✍️ಮುಹಮ್ಮದ್ ಹನೀಫ್ ಅಲ್ ಅಝ್ಹರಿ ತೀರ್ಥಹಳ್ಳಿ
ಹೈದರ್ ಉಸ್ತಾದ್ ಕರಾಯ ….
ಈ ಹೆಸರು ಕೇಳದವರು ವಿರಳ…
ರಾಜ್ಯ ಕಂಡ ಉನ್ನತ ವಿದ್ವಾಂಸರಲ್ಲಿ ಓರ್ವರು…ವಿನಯದ ಪ್ರತೀಕ
ಜಂಇಯ್ಯತುಲ್ ಉಲಮಾ ಕೇಂದ್ರ ಸಮಿತಿಯ ಮುಶಾವರ ಅಂಗ, ಪ್ರತಿಷ್ಠಿತ ಅಲ್ ಅಝ್ಹರಿಯಾ ಮಂಗಳೂರು ಇದರ ಪ್ರಾಂಶುಪಾಲರು..
ಹೀಗೆ ಹಲವಾರು ವೈಶಿಷ್ಟ್ಯಗಳ ರೂವಾರಿಯಾದ ಶೈಖುನಾ ಹೈದರ್ ಮದನಿ ಕರಾಯ ಉಸ್ತಾದರು ನಡೆದು ಬಂದ ಹಾದಿಯ ಬಗ್ಗೆ ಒಂದಿಷ್ಟು….
ಬೆಳ್ತಂಗಡಿ ತಾಲೂಕಿನ ಸರಳಿಕಟ್ಟೆ ಸಮೀಪದ ಇರ್ದೇ ಎಂಬಲ್ಲಿ ಇಬ್ರಾಹಿಂ ಮತ್ತು ಖತೀಜಾ ದಂಪತಿಗಳ ಕಿರಿಯ ಪುತ್ರನಾಗಿ ಉಸ್ತಾದರ ಜನನ.
40 ದಿನದ ಮಗುವಿರುವಾಗ ತಂದೆಯ ವಫಾತ್
ಬಾಲ್ಯದಲ್ಲೇ ಕಷ್ಟಕರ ಜೀವನ..
ಮದ್ರಸ ಕಲಿಯುತ್ತಿರುವಾಗ ಪ್ರತಿಭಾವಂತ ವಿದ್ಯಾರ್ಥಿಯಾದ ಉಸ್ತಾದರನ್ನು ಗುರುತಿಸಿ ಅಂದಿನ ಮದರಸ ಉಸ್ತಾದರಾದ ದಾವೂದ್ ಹಾಜಿ ಮಂಜನಾಡಿಯವರು, ಪ್ರಮುಖ ಪಂಡಿತರೂ ಸೂಫೀ ವರ್ಯರಾದ ಶೈಖುನಾ ಪೂಚಕ್ಕಾಡ್ ಉಸ್ತಾದರ ಬಳಿ ದರ್ಸ್ ಕಲಿಯಲು ಸೇರಿಸಿದರು.
ನಂತರ ದಕ್ಷಿಣ ಭಾರತದ ಅಜ್ಮೀರ್ ಎಂದೇ ಖ್ಯಾತಿ ಪಡೆದ ಸಯ್ಯದ್ ಮದನಿ ಉಳ್ಳಾಲದಲ್ಲಿ ವಿಶ್ವೊತ್ತರ ವಿದ್ವಾಂಸರಾದ ಶೈಖುನಾ ತಾಜುಲ್ ಉಲಮಾ ಉಳ್ಳಾಲ ತಂಙಳರ ದರ್ಸ್ ನಲ್ಲಿ ದೀರ್ಘ ಕಾಲ ಅಧ್ಯಯನ ನಡೆಸಿ, ತಾಜುಲ್ ಉಲಮಾ ಉಳ್ಳಾಲ ತಂಙಳರ ಪ್ರೀತಿಯ ಶಿಷ್ಯನಾಗಿ ಪ್ರಥಮ ದರ್ಜೆಯೊಂದಿಗೆ ಮೌಲವಿ ಫಾಝಿಲ್ ಮದನಿ ಬಿರುದು ಪಡೆದು ಧಾರ್ಮಿಕ ಸೇವಾ ರಂಗಕ್ಕಿಳಿದರು.ಶೈಖುನಾ ತಾಯಕೋಡ್ ಉಸ್ತಾದ್, ಶೈಖುನಾ ಬೈತಾರ್ ಉಸ್ತಾದ್, ಶೈಖುನಾ ಅಹ್ಮದ್ ಬಾವ ಉಸ್ತಾದ್ ರವರು ದರ್ಸ್ ರಂಗದ ಪ್ರಮುಖ ಗುರುವರ್ಯರಾಗಿದ್ದಾರೆ..
ತಾಜುಲ್ ಉಲಮಾ ಉಳ್ಳಾಲ ತಂಙಳರ ನಿರ್ದೇಶನದಂತೆ, ಕುತುಬುಲ್ ಆಲಂ ಶೈಖುನಾ ಸಿ.ಎಂ ( ಖ.ಸಿ ) ರವರ ಆಶೀರ್ವಾದದೊಂದಿಗೆ ಬೆಳ್ತಂಗಡಿ ತಾಲೂಕಿನ ಉರುವಾಲು ಪದವು ಕೇಂದ್ರ ಜುಮಾ ಮಸೀದಿಯಲ್ಲಿ ಪ್ರಥಮವಾಗಿ ದರ್ಸ್ ಆರಂಭಿಸಿದರು. ತದ ನಂತರ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮೊಹಲ್ಲಾಗಳಾದ ಕೆಮ್ಮಾರ, ವಿಟ್ಲ , ಬೆಳ್ಳಾರೆ , ಉಜಿರೆಯಲ್ಲಿ ಸೇವೆಯನ್ನು ಸಲ್ಲಿಸಿ ಇದೀಗ ಕಳೆದ 22 ವರ್ಷಗಳಿಂದ ಮಂಗಳೂರಿನ ಹೃದಯ ಭಾಗದಲ್ಲಿ ತಲೆ ಎತ್ತಿ ನಿಂತಿರುವ ಜಾಮಿಯಾ ಅಲ್ -ಅಝ್ಹರಿಯಾ ಸಂಸ್ಥೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ..
ಸುದೀರ್ಘ 45 ವರ್ಷದ ದರ್ಸ್ ಪರಂಪರೆ ಹೊಂದಿರುವ ಶೈಖುನಾ ಉಸ್ತಾದರು ಹಲವಾರು ಶಿಷ್ಯ ಸಮೂಹವನ್ನು ಸಮುದಾಯಕ್ಕೆ ಸಮರ್ಪಿಸಿದ್ದಾರೆ. ಉಸ್ತಾದರ ಶಿಷ್ಯಂದಿರು ರಾಜ್ಯದ ವಿವಿಧ ಮೊಹಲ್ಲಾಗಳಲ್ಲಿ ಮುದರ್ರಿಸರಾಗಿ , ಖತೀಬರಾಗಿ ಮತ್ತು ಧಾರ್ಮಿಕ , ಲೌಕಿಕ , ಸಾಮಾಜಿಕ ಮುಂತಾದ ರಂಗಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕರ್ಮ ಶಾಸ್ತ್ರ, ನಹ್ವ್ ಮಂತಿಕ್ ಎಂಬೀ ವಿಷಯಗಳಲ್ಲಿ ಅಗಾಧ ಪಾಂಡಿತ್ಯ ಹೊಂದಿರುವ ಶೈಖುನಾರವರು ಉಸ್ತಾದುಲ್ ಅಸಾತೀದ್ಸ್ ಆಗಿದ್ದಾರೆ.
ಅಧ್ಯಾತ್ಮಿಕ ನಾಯಕರಾದ C.M ವಳಿಯುಲ್ಲಾಹಿ (ಮಡವೂರ್ ಶೈಖ್) ಕಕ್ಕಡಿಪ್ಪುರಮ್ ಅಬೂಬಕ್ಕರ್ ಶೈಖ್, ಜಾವಗಲ್ ಬಾಬಾ ಸಹಿತ ಹಲವಾರು ಉನ್ನತ ಸೂಫೀ ವರ್ಯರೊಂದಿಗೆ ಅಭೇದ ಸಂಬಂಧ ಮತ್ತು ಅಂಗೀಕಾರ ಪಡೆದ ಉಸ್ತಾದರು ಯಾವುದೇ ವೇದಿಕೆ , ಪ್ರಚಾರ ಬಯಸದೆ ತನ್ನ ಜೀವನದ ಪುರುಷಾಯುಷ್ಯವನ್ನು ದರ್ಸ್ ಗಾಗಿ ಮುಡಿಪಾಗಿಟ್ಟಿದ್ದಾರೆ.
ವಹಿಸುತ್ತಿರುವ ಹುದ್ದೆಗಳು
- ಅಲ್ ಅಝ್ಹರಿಯಾ ಬಂದರ್ ಮಂಗಳೂರು ಇದರ ಗೌರವಾನ್ವಿತ ಪ್ರಾಂಶುಪಾಲರು
- ಕರ್ಣಾಟಕ ಜಂ ಇಯತುಲ್ ಉಲಮಾ ಇದರ ಫತ್ವಾ ಬೋರ್ಡ್ ಸದಸ್ಯರು ಮತ್ತು ಕೇಂದ್ರ ಮುಶಾವರ ಅಂಗ
- ಮದನೀಸ್ ಕೇಂದ್ರ ಸಮಿತಿಯ ಪ್ರಧಾನ ನಿರ್ದೇಶಕರು
- ಕರಾಯ ಬದ್ರಿಯಾ ಜುಮಾ ಮಸೀದಿ ಇದರ ಆಡಳಿತ ಸಮಿತಿ ಸಹಿತ ಕರಾಯ ಸುನ್ನೀ ಸಂಘ ಕುಟುಂಬದ ಮಾರ್ಗದರ್ಶಕರು
ಒಲಿದು ಬಂದ ಅವಾರ್ಡ್
- ಶೈಖುನಾರ ಉಸ್ತಾದರ ದರ್ಸ್ ಸೇವಾ ರಂಗವನ್ನು ಗುರುತಿಸಿ ಸಯ್ಯಿದ್ ಕುಂಬೋಲ್ ತಂಙಳ್ ,ಖುರ್ರತುಸ್ಸಾದಾತ್ ಕೂರ ತಂಙಳ್ ನಿರ್ದೇಶನದಂತೆ ಶೈಖುನಾ ಬೇಕಲ್ ಉಸ್ತಾದ್, ಶರಫುಲ್ ಉಲಮಾ ಮಂಜನಾಡಿ ಉಸ್ತಾದ್ , ಝೈನುಲ್ ಉಲಮಾ ಮಾಣಿ ಉಸ್ತಾದ್, ಪೇರೋಡ್ ಉಸ್ತಾದ್ ಸಹಿತ ಹಲವಾರು ಉಲಮಾ ಸಾದಾತುಗಳ ಸಾನಿಧ್ಯದಲ್ಲಿ ಉಪ್ಪಿನಂಗಡಿ H.M ಹಾಲ್ ಸಭಾಂಗಣದಲ್ಲಿ ಬ್ರಹತ್ ಗೌರವಾರ್ಪಣೆ.
- ದರ್ಸ್ ಸೇವೆಯನ್ನು ಗುರುತಿಸಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದರಿಂದ ಮಂಗಳೂರು ಕಂದಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವಾರ್ಪಣೆ.
- ಉಜಿರೆ ಮಲ್ಜಹ್ ಸಂಸ್ಥೆಯಿಂದ ಪೋಸೋಟ್ ತಂಙಳ್ ಅವಾರ್ಡ್.
- ಉಪ್ಪಿನಂಗಡಿ ಮುರ ಸುನ್ನೀ ಸಂಘ ಸಂಸ್ಥೆಗಳ ವತಿಯಿಂದ ಖ್ವಾಜಾ ಮುಈನ್ ಅವಾರ್ಡ್.
- ಅಲ್ – ಮದೀನಾ ವಿದ್ಯಾ ಸಂಸ್ಥೆಯಿಂದ ಬೆಳ್ಳಿ ಹಬ್ಬದ ಪ್ರಯುಕ್ತ ತಾಜುಲ್ ಉಲಮಾ ಅವಾರ್ಡ್.
ಕುಟುಂಬ ಜೀವನ
ಸೂಫೀವರ್ಯರಾದ ಮರ್ಹೂಮ್ ಅಬೂಬಕ್ಕರ್ ಹಾಜಿ ಚೊಕ್ಕಬೆಟ್ಟು ,ಕೃಷ್ಣಾಪುರ ಇವರ ಪ್ರಥಮ ಪುತ್ರಿ ಹವ್ವಾಹ್ ಆಗಿರುತ್ತಾರೆ ಧರ್ಮ ಪತ್ನಿ.
ಅನಿವಾಸಿ ಕನ್ನಡಿಗರ ಬೃಹತ್ ಸಂಘಟನೆಯಾದ KCF ಇದರ ಸಕ್ರಿಯ ಕಾರ್ಯಕರ್ತರಾದ ಮುಸ್ತಫಾ ಕರಾಯ, ಅಲ್ ಮದೀನಾ ಮಂಜನಾಡಿ
ಹಿಫ್ಲ್ ಕಾಲೇಜ್ ಇದರ ಪ್ರಾಂಶುಪಾಲರಾದ ಅಲ್ ಹಾಫಿಲ್ ಇಬ್ರಾಹಿಂ ಮರ್ಶದ್ ಹುಮೈದಿ ಕರಾಯ, ಬೊಳ್ಳಾಯಿ ಕೇಂದ್ರ ಜುಮಾ ಮಸೀದಿಯ ಖತೀಬರಾದ ಶಾಫಿ ಮದನಿ ಅಲ್ ಅಝ್ಹರಿ ಕರಾಯ ಸಹಿತ 8 ಗಂಡು ಮಕ್ಕಳು 2 ಹೆಣ್ಣು ಮಕ್ಕಳು.
ಸರಳ ಜೀವನ, ಸಾಧು ಸ್ವಭಾವ, ವಿನಯವನ್ನು ಮೈಗೂಡಿಸಿಗೊಂಡ ಉಸ್ತಾದರ ಧನ್ಯ ಬದುಕು ಅವರ್ಣನೀಯ. ಸಣ್ಣ ಮಕ್ಕಳಿಂದ ಹಿಡಿದು ವಯೋ ವೃದ್ಧರನ್ನು ಪ್ರೀತಿಪೂರ್ವಕ ಕಾಣುವ ಉಸ್ತಾದರ ಗುಣ ನಡತೆ ಅನನ್ಯ.
ಆಧ್ಯಾತ್ಮಿಕತೆಯ ಮೂಲಕ ದರ್ಸ್ ಸೇವೆಯನ್ನೇ ಅಸ್ತ್ರವಾಗಿಸಿರುವ ಉಸ್ತಾದರ ಪ್ರತಿಯೊಂದು ಹೆಜ್ಜೆಯೂ ಶ್ಲಾಘನೀಯ.
ಯಾವುದೇ ವೇದಿಕೆ ಪ್ರಚಾರ, ಹುದ್ದೆ ಬಯಸದ ಉಸ್ತಾದರು ವಿನಯದ ಪ್ರತೀಕವಾಗಿದ್ದಾರೆ.
ಅಲ್ಲಾಹು ದೀರ್ಘ ಆಯುಷ್ಯ ಕರುಣಿಸಲಿ.
ಸುದೀರ್ಘ ಕಾಲ ದರ್ಸ್ ಸೇವೆ ನಡೆಸಲು ಆಫಿಯತ್ ಮತ್ತು ಆರೋಗ್ಯವನ್ನು ಕರುಣಿಸಲಿ ಆಮೀನ್.







