✍️ ಎಂ ಹೆಚ್ ಹಸನ್ ಝುಹ್ರಿ, ಮಂಗಳಪೇಟೆ
ಸಮಸ್ತ100: ಇದರ ಪ್ರಯುಕ್ತ ಸುನ್ನೀ ಶಿಕ್ಷಣ ಮಂಡಳಿಯಲ್ಲಿ ಆರಂಭ ಕಾಲದಿಂದಲೇ ಮುಅಲ್ಲಿಮರಾಗಿ ಸೇವೆ ಮಾಡಿದ ಅಧ್ಯಾಪಕರಿಗೆ ನೀಡುವ “ಸಮಸ್ತ ಸೆಂಚುರಿ ಮುಅಲ್ಲಿಮ್ ಅವಾರ್ಡ್” ಗೆ ಕರ್ನಾಟಕ ಜಂಇಯತುಲ್ ಮುಅಲ್ಲಿಮೀನ್ ಇದರ ರಾಜ್ಯಾಧ್ಯಕ್ಷರಾದ ಜಪ್ಪು ಮದನಿ ಉಸ್ತಾದರು ಆಯ್ಕೆ ಯಾಗಿ ಪ್ರಶಸ್ತಿ ಪಡೆದಿದ್ದಾರೆ. ನಿಜಕ್ಕೂ ಇದು ಅರ್ಹತೆಗೆ ಸಂದ ಗೌರವವಾಗಿದೆ. ಈ ಪ್ರಶಸ್ತಿ ಮೂಲಕ ಕರ್ನಾಟಕದ ಮುಅಲ್ಲಿಮ್ ವಿಭಾಗದ ಘನತೆ ಯನ್ನು ಅವರು ಎತ್ತಿ ಹಿಡಿದಿದ್ದಾರೆ. ಅವರಂತೆ ಇನ್ನು ಹಲವು ಮುಅಲ್ಲಿಮರು ಈ ಪ್ರಶಸ್ತಿ ಪಡೆದಿದ್ದು ಕರ್ನಾಟಕದ ಪಾಲಿಗೆ ಹೆಮ್ಮೆಯ ವಿಷಯವಾಗಿದೆ.ಅಭಿಮಾನದ ಸಂಕೇತ ವಾಗಿದೆ.
ಜಪ್ಪು ಮದನಿ ಎಂದೇ ಖ್ಯಾತಿ ಪಡೆದ ಅಬ್ದುಲ್ ರಹ್ಮಾನ್ ಮದನಿ ಉಸ್ತಾದ್ 1989 ರಿಂದಲೂ ಮದ್ರಸ ರಂಗದಲ್ಲಿ ತೊಡಗಿಸಿಕೊಂಡವರು.ಅವರು ತಮ್ಮ ಪರಿಶ್ರಮವನ್ನು ಕೇವಲ ಮದ್ರಸ ರಂಗದಲ್ಲಿ ಮಾತ್ರ ಸೀಮಿತಗೊಳಿಸದೆ, ತನ್ನ ಕಾರ್ಯಕ್ಷೇತ್ರವನ್ನು ಮದ್ರಸ ಸಬಲೀಕರಣ ಮತ್ತು ಮುಸ್ಲಿಂ ಸಮೂಹದ ಧಾರ್ಮಿಕ ಉನ್ನತಿಗಾಗಿ ವಿನಿಯೋಗಿಸಿದರು. ಜಪ್ಪು ಮದನಿ ಸಹಿತ ಇರುವ ನಾಯಕರ ಸತತ ಪ್ರಯತ್ನದ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯು ಧಾರ್ಮಿಕ ಸೊಬಗಿನಿಂದ ಕಂಗೊಳಿಸುವಂತಾಗಿದೆ. ಉತ್ತರ ಕರ್ನಾಟಕದ ಜನಜೀವನವನ್ನು ಕಣ್ಣಾರೆ ಕಂಡ ನಮಗೆ, ಅಂತಹ ಒಂದು ಸ್ಥಿತಿ ನಮ್ಮೂರಲ್ಲೂ ಇತ್ತು ಎಂಬುದು ಮರೆಯಬಾರದು.ಆ ಪರಿಸ್ಥಿತಿ ಬದಲಾವಣೆಗೆ ಕಾರಣ ಇಂತಹ ನಾಯಕರಾಗಿದ್ದಾರೆ.ಅವರ ಅವಿಶ್ರಾಂತ ಪರಿಶ್ರಮದ ಫಲ ಇಂದು ಮುಸ್ಲಿಂ ಸಮುದಾಯ ಉಣ್ಣುತ್ತಿದೆ.
ಎರಡು ಸಾವಿರ ಇಸವಿಯ ಮೊದಲಿನ ದಕ್ಷಿಣ ಕನ್ನಡ ಜಿಲ್ಲೆಯ ಚಿತ್ರಣವನ್ನೊಮ್ಮೆ ನೋಡಿ.ಅಂದು ಇಂದಿನಂತೆ ಆಧುನಿಕ ಸೌಕರ್ಯಗಳು ಇರಲಿಲ್ಲ. ಲಾಂಡ್ ಪೋನ್ ಮೂಲಕ ಅಥವಾ ಪತ್ರ ವ್ಯವಹಾರಗಳ ಮೂಲಕ ಮಾತ್ರ ಸಂಪರ್ಕ ಮಾಡಬೇಕಿತ್ತು.ಸ್ವಂತ ವಾಹನ ಕೂಡ ಇರದ ಕಾಲವದು. ಬಸ್ ಕೂಡ ಇಂದಿನಂತೆ ವ್ಯಾಪಕವಾಗಿರಲಿಲ್ಲ. ನಿಗದಿತ ಸಮಯಕ್ಕೆ ಮಾತ್ರ ಬಸ್ ವ್ಯವಸ್ಥೆ ಇತ್ತು. ಆಧುನಿಕ ವಾಗಿ ಸೌಕರ್ಯ ಗಳು ಇಲ್ಲದ ಕಾಲದಲ್ಲಿ ಮದ್ರಸಾ ರಂಗಕ್ಕಾಗಿ ಜಪ್ಪು ಉಸ್ತಾದರಂತವರು ದುಡಿದರು. ಅವರ ಪ್ರವರ್ತನೆಯ ಕಾರಣ ಮದ್ರಸ ರಂಗವು ವ್ಯಾಪಿಸಿತು.ಆ ಕಾಲದಲ್ಲಿ ಮಂಗಳೂರು ಕೇಂದ್ರ ವಾಗಿಟ್ಟು ಕೊಂಡು ಮದ್ರಸ ರಂಗದಲ್ಲಿ ಕಾರ್ಯಾಚರಿಸಿದವರ ಪೈಕಿ ಜಪ್ಪು ಮದನಿಯವರೂ ಒಬ್ಬರು.
ನೂರಾರು ಸಮಸ್ಯೆ ಗಳ ಮಧ್ಯೆ ಓಡಾಡಿ, ಮದ್ರಸ ಸಬಲೀಕರಣಕ್ಕೆ ಮುನ್ನಡಿ ಬರೆದು, ನಮ್ಮ ಮಕ್ಕಳು ಮದ್ರಸ ಶಿಕ್ಷಣದಿಂದ ವಂಚಿತರಾಗಬಾರದೆಂದು ಪ್ರಯತ್ನ ಪಟ್ಟ ಕೆಲವು ನಾಯಕರಲ್ಲಿ ಜಪ್ಪು ಮದನಿಯವರೂ ಸೇರಿದ್ದಾರೆ.ಸರಿ ಸುಮಾರು ಮೂವತ್ತೈದು ವರ್ಷಗಳಿಂದ ಸೇವಾ ರಂಗದಲ್ಲಿ ಸಕ್ರೀಯ ವಾಗಿ ದುಡಿಯುತ್ತಿದ್ದಾರೆ. ಜಪ್ಪು ಎಂಬ ಊರನ್ನು ಕರ್ಮ ಭೂಮಿಯಾಗಿ ಆರಂಭಿಸಿದ ಜಪ್ಪು ಮದನಿಯವರು ಕರ್ನಾಟಕ ಮೊದಲ ರೇಂಜ್ ಎಂಬ ಹೆಗ್ಗಳಿಕೆ ಹೊಂದಿದ್ದ ಮಂಗಳೂರು ರೇಂಜ್ ಇದರ ಮೊದಲ ಪರೀಕ್ಷಾ ಬೋರ್ಡ್ ಚಯರ್ಮ್ಯಾನ್ ಆಗಿದ್ದರು. ಬಳಿಕ ಮಂಗಳೂರು ರೇಂಜ್ ಅಧ್ಯಕ್ಷ ಪದವಿಯನ್ನು ಅಲಂಕರಿಸಿದರು.ಅಷ್ಟರ ತನಕ ಮಂಗಳೂರು ರೇಂಜ್ ಆಗಿ ಮಾತ್ರ ಕಾರ್ಯಾಚರಣೆ ನಡೆಯುತಿತ್ತು. ಕಾರ್ಯಾಚರಣೆ ವಿಶಾಲ ಗೊಳಿಸಲು ವಿವಿಧ ರೇಂಜ್ ಗಳು ಅಸ್ತಿತ್ವಕ್ಕೆ ಬಂದವು. 2003 ರಲ್ಲಿ SJM ಕೇಂದ್ರ ಸಮಿತಿಯ ಉಪಾಧ್ಯಕ್ಷರಾಗಿ ಜಪ್ಪು ಮದನಿ ಉಸ್ತಾದರನ್ನು ಆಯ್ಕೆ ಮಾಡಲಾಯಿತು. ಅದೇ ವರ್ಷ ವಿದ್ಯಾಭ್ಯಾಸ ಬೋರ್ಡ್ ಆಡಳಿತ ಸಮಿತಿಯ ಸದಸ್ಯರಾಗುವ ಹಾಗೂ ಕೇಂದ್ರ ಪರೀಕ್ಷಾ ಬೋರ್ಡ್ ನಲ್ಲಿ ಸೇರುವ ಭಾಗ್ಯ ಕೂಡ ಅವರಿಗೆ ಲಭಿಸಿತ್ತು.2004 ರಲ್ಲಿ ದಕ್ಷಿಣ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಅವರಿಗೆ ದೀರ್ಘಕಾಲ ಸೇವೆ ಮಾಡುವ ಅವಕಾಶ ಒದಗಿ ಬಂತು.
ಕರ್ನಾಟಕದ ಮುಅಲ್ಲಿಮ್ ವಿಭಾಗದ ಅತ್ಯಂತ ಶ್ರೇಷ್ಠ ನಾಯಕ ಎಂಬ ಗೌರವಕ್ಕೆ ಪಾತ್ರರಾಗಿದ್ದ ಮರ್ಹೂಮ್ ಆತೂರು ಸಅದ್ ಉಸ್ತಾದರ ಅಗಲಿಕೆಯ ಬಳಿಕ ಆ ಸ್ಥಾನಕ್ಕೆ ಸೂಕ್ತ ಮತ್ತು ಅರ್ಹ ವ್ಯಕ್ತಿ ಜಪ್ಪು ಮದನಿಯವರು ಎಂದು ಮನಗಂಡ ಕೇಂದ್ರ ಜಂಇಯತುಲ್ ಮುಅಲ್ಲಿಮೀನ್ ನಾಯಕರು ಸಯ್ಯಿದ್ ಭಾಪಕೀ ತಂಙಳ್ ರವರ ನಾಯಕತ್ವದಲ್ಲಿ ಸೇರಿದ ಸಭೆಯಲ್ಲಿ SJM ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರಾಗಿ ಅವರನ್ನೇ ನೇಮಕ ಮಾಡಿದರು. ಹೀಗೆ ಕರ್ಮ ರಂಗದಲ್ಲಿ ಜೀವನದ ಬಹು ಭಾಗ ಸೇವೆ ಮಾಡಲು ಅವಕಾಶ ಲಭಿಸಿದ ಭಾಗ್ಯ ಪುರುಷ ಜಪ್ಪು ಮದನಿ ಉಸ್ತಾದರು. ಹಾಗಾಗಿ ಇಂದು ಅರ್ಹವಾಗಿಯೇ ಅವರು ಪ್ರಶಸ್ತಿ ಪಡೆದಿದ್ದಾರೆ. ಅಂದು ಜಪ್ಪು ಮದನಿ ಉಸ್ತಾದ್ ಸಹಿತ ಇರುವ ನಾಯಕರು ನಡೆಸಿದ ತ್ಯಾಗ ಮಯ ಸೇವೆಯ ಕಾರಣ ಇಂದು ಕರ್ನಾಟಕದ ಹನ್ನೆರಡು ಜಿಲ್ಲೆಗಳಲ್ಲಿ ಅರವತ್ತೆರಡು ರೇಂಜ್ ಗಳು ಕಾರ್ಯಾಚರಿಸುತ್ತಿದೆ.
ಎರಡು ಸಾವಿಕ್ಕೂ ಮಿಕ್ಕ ಮದ್ರಸ ಅಧ್ಯಾಪಕರಿದ್ದಾರೆ. ಸಾವಿರಾರು ಮದ್ರಸಗಳು ತಲೆಯೆತ್ತಿ ನಿಂತಿವೆ. ಮದ್ರಸ ವಿಷಯದಲ್ಲಿ ಕೇರಳದವರನ್ನೇ ಆಶ್ರಯಿಸುವ ಕಾಲವೊಂದಿತ್ತು. ಪರೀಕ್ಷಾ ಅಧಿಕಾರಿಗಳಾಗಿ,ಮುಫತ್ತಿಶರಾಗಿ ಕೇರಳದವರೇ ಬರುತ್ತಿದ್ದರು. ಅದನ್ನು ಬದಲಿಸಿ ಕರ್ನಾಟಕದವರನ್ನೇ ಇಲ್ಲಿಯ ಅಧಿಕಾರಿಗಳಾಗಿ ಮಾಡಬೇಕೆಂಬ ಜಪ್ಪು ಮದನಿ ಉಸ್ತಾದರ ಸಹಿತ ಇರುವವರ ಪ್ರಯತ್ನದ ಫಲವಾಗಿ ಇಲ್ಲಿ ಇಪ್ಪತ್ತೈದು ಪರೀಕ್ಷಾ ಅಧಿಕಾರಿಗಳು ಮತ್ತು ಹತ್ತಕ್ಕಿಂಲೂ ಮಿಕ್ಕ ಮುಫತ್ತಿಶ್ ಗಳನ್ನು ಸೃಷ್ಟಿಸಲು ಸಾಧ್ಯವಾಗಿದೆ. ಜಪ್ಪು ಸಾಗರದ ಹೂವಿನಹಳ್ಳಿ , ಮಂಗಳಪೇಟೆ, ಕಂಬಳ ಬೆಟ್ಟು, ಬೈರಿಕಟ್ಟೆ ಮುಂತಾದ ಕಡೆಗಳಲ್ಲಿ ಖತೀಬ್ ಸದರ್ ಆಗಿ ಸೇವೆ ಮಾಡಿದ ಜಪ್ಪು ಮದನಿ ಉಸ್ತಾದ್ ಇದೀಗ SJM ಇದರ ಮುಫತ್ತಿಶರಾಗಿಯೂ ಹಾಗೂ ಕೇಂದ್ರ ಸಮಿತಿಯ ಮಂಗಳೂರು ಕಛೇರಿಯ ಮೇಲುಸ್ತುವಾರಿಯಾಗಿ ಸೇವೆ ಮಾಡುತ್ತಿದ್ದಾರೆ. ಅಲ್ಲಾಹನು ದೀರ್ಘಕಾಲ ಮದ್ರಸ ರಂಗದಲ್ಲಿ ದುಡಿಯಲು ಭಾಗ್ಯ ಕರುಣಿಸಲಿ.







