ಬಡವರ ಕಣ್ಣೀರೊರೆಸುವ ಕಾರ್ಯಕ್ಕೆ ಇಸ್ಲಾಂ ದೊಡ್ಡ ಮಹತ್ವ ನೀಡಿದೆ: ಇಕ್ರಾಮುಲ್ಲಾ ಸಖಾಫಿ
ನಾವುಂದ: ಬಡ ಕುಟುಂಬಗಳ ಮದುವೆ, ಮನೆ ನಿರ್ಮಾಣ, ಪುಸ್ತಕ ವಿತರಣೆ, ಅನಾಥ-ಅಗದಿಗಳಿಗೆ ಸಹಾಯಧನ ಹೀಗೆ ಬಡವರ ಕಣ್ಣೀರೊರೆಸುವ ಕಾರ್ಯಗಳಿಗೆ ಇಸ್ಲಾಂ ಅಧಿಕ ಮಹತ್ವ ನೀಡಿದೆ ಎಂದು ನಾವುಂದ ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಲ್-ಹಾಜಿ ಇಕ್ರಾಮುಲ್ಲಾ ಸಖಾಫಿ ಅಭಿಪ್ರಾಯ ಪಟ್ಟರು. ಅವರು ಕೋಯನಗರ ಬದ್’ರುಲ್ ಹುದಾ ವೆಲ್ಫೇರ್ ಅಸೋಸಿಯೇಷನ್ ಸಮಿತಿಯ ಹೊಸ ಕಛೇರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅಧ್ಯಯನ ಶಿಬಿರಗಳು, ಮಹಿಳಾ ಶಿಬಿರಗಳು ಹೀಗೆ ವಿದ್ಯಾದಾಹಿಗಳಿಗೆ ವಿದ್ಯೆದಾನ ಮಾಡುತ್ತಿರುವ ಬದ್’ರುಲ್ ಹುದಾ ಸಮಿತಿಯ ಕಾರ್ಯಚಟುವಟಿಕೆಗಳನ್ನು ಅವರು ಅಭಿನಂದಿಸಿದರು.ಕೋಯನಗರ ನೂರುಲ್ ಹುದಾ ಮಸೀದಿ ಎದುರುಗಡೆ ಇರುವ ಎಸ್.ಜೆ.ಬಿ.ಕೋಯ ಕಟ್ಟಡದಲ್ಲಿ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ನಾವುಂದ ಜಮಾಅತ್ ಕಮಿಟಿ ಅಧ್ಯಕ್ಷ ತೌಫೀಖ್ ಅಬ್ದುಲ್ಲಾ ಹಾಜಿಯವರು ಮಾತನಾಡಿ ಪ್ರತೀ ಸಂಘಟನೆಗಳ ಯಶಸ್ಸು ನಾಯಕರ ಕ್ಷಮೆಗಳಿಂದ ಮಾತ್ರವಾಗಿದ್ದು, ಟೀಕೆ ಟಿಪ್ಪಣಿಗಳು ಬಂದಾಗ ಯಾರೂ ದುಡುಕದೆ ಸಮಾಧಾನದಿಂದಲೂ ಸೌಹಾರ್ಧದಿಂದಲೂ ಕಾರ್ಯಾಚರಿಸುತ್ತಿರುವಂತೆ ಅವರು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೋಯನಗರ ನೂರುಲ್ ಹುದಾ ಮಸೀದಿ ಇಮಾಮರಾದ ಕೊಂಬಾಳಿ ಕೆ.ಎಂ.ಎಚ್. ಝುಹುರಿ ಪ್ರಾಸ್ತಾವಿಕವಾಗಿ ಮಾತನಾಡಿ, ಯುವಕರು ನಾಡಿನ ಕನಸುಗಳು, ಆ ಕನಸುಗಳನ್ನು ನನಸಾಗಿಸಲು ಎಲ್ಲರೂ ಸಹಬಾಳ್ವೆಯಿಂದ ಮುಂದೆ ಸಾಗಿ, ಎಂಬ ಹಿತವಚನದೊಂದಿಗೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಹಾಜಿ ಅಯ್ಯೂಬ್ ಮುಸ್ಲಿಯಾರ್, B.A.K. ಸೆಯ್ಯಿದ್ ಹಾಜಿ, A.J.B. ಕೋಯ ಹಾಜಿ, B.E. ಮುಹಮ್ಮದಲೀ ಹಾಜಿ, ಮೊಹಲ್ಲಾ ಕಮಿಟಿ ಅಧ್ಯಕ್ಷ ಇರ್ಷಾದ್, ಕೋಶಾಧಿಕಾರಿ ಸತ್ತಾರ್ ಗಂಗೊಳ್ಳಿ, ಬದ್’ರುಲ್ ಹುದಾ ಕಮಿಟಿ ಅಧ್ಯಕ್ಷ ಸಮೀರ್ ಮುಲ್ಲಾ ಹಾಗೂ ಇನ್ನಿತರ ನಾಯಕರು ಉಪಸ್ಥಿತರಿದ್ದರು.
ಮೊಹಲ್ಲಾ ಕಮಿಟಿ ಪ್ರ.ಕಾರ್ಯದರ್ಶಿ ಅಡ್ವಕೇಟ್ ಇಲ್ಯಾಸ್ ನಾವುಂದ ಸ್ವಾಗತಿಸಿ, ಇಖ್ಬಾಲ್ ದಾರಿಮಿ ವಂದಿಸಿದರು. ಬದ್’ರುಲ್ ಹುದಾ ಕಮಿಟಿ ಪ್ರ.ಕಾರ್ಯದರ್ಶಿ ಕೆ.ಎಂ. ಇರ್ಷಾದ್ ಕಾರ್ಯಕ್ರಮ ನಿರೂಪಿಸಿದರು.