ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ ಜೀವ ಬೆದರಿಕೆಯಿರುವುದರಿಂದ ಕೇಂದ್ರ ಗೃಹ ಸಚಿವಾಲಯ ಬಿಗಿ ಭದ್ರತೆ ಒದಗಿಸಿದೆ. ವಿಶೇಷ ಭದ್ರತೆ ಒದಗಿಸಿರುವುದರಿಂದ ಸಚಿವರು ಅಥವಾ ಅಧಿಕಾರಿಗಳು ತಪಾಸಣೆಗೆ ಒಳಗಾದ ನಂತರವೇ ಮೋದಿಯವರನ್ನು ಭೇಟಿಯಾಗಬಹುದು. ಪ್ರಧಾನಿಯವರಿಗೆ ಜೀವ ಬೆದರಿಕೆಯಿರುವ ಬಗ್ಗೆ ಗೃಹ ಸಚಿವಾಲಯ ರಾಜ್ಯಗಳ ಎಲ್ಲ ಪೊಲೀಸ್ ಮುಖ್ಯಸ್ಥರಿಗೂ ಪತ್ರ ಬರೆದಿದೆ.
2019ರ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಈ ಹೊತ್ತಲ್ಲಿ ಪ್ರಧಾನಿ ಟಾರ್ಗೆಟ್ ಆಗುವ ಸಾಧ್ಯತೆ ಇದೆ. ಹಾಗಾಗಿ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಿ ಎಂದು ರಾಷ್ಟ್ರೀಯ ಭದ್ರತಾ ಮಂಡಳಿ ಹೇಳಿದೆ.
ಪ್ರಧಾನಿಯವರಿಗೆ ಜೀವ ಬೆದರಿಕೆ ಇದ್ದೇ ಇರುತ್ತದೆ. ಆದರೆ ನಕ್ಸಲ್ ಬೆದರಿಕೆ ಲಭಿಸಿದ ಹಿನ್ನೆಲೆಯಲ್ಲಿ ನಾವು ವಿಶೇಷ ಭದ್ರತೆ ಒದಗಿಸಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಎನ್‍ಡಿಟಿವಿ ವರದಿ ಮಾಡಿದೆ.
ಪ್ರಧಾನಿ ರೋಡ್ ಶೋ ನಡೆಸುವಾಗ ‘ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿದ ರೀತಿಯಲ್ಲಿ ಹತ್ಯೆ ಮಾಡಲು ಸಂಚು’ ರೂಪಿಸಿದ್ದಾರೆ ಎಂದು ಶಂಕಿತ ಮಾವೋವಾದಿಯಿಂದ ವಶಪಡಿಸಿಕೊಳ್ಳಲಾದ ಪತ್ರವೊಂದರಲ್ಲಿ ಇತ್ತು ಎಂದು ಪುಣೆ ಪೊಲೀಸರು ಹೇಳಿದ್ದಾರೆ.
2019ರ ಲೋಕಸಭಾ ಚುನಾವಣೆ ಮತ್ತು ರಾಜ್ಯಗಳ ಚುನಾವಣೆಯಲ್ಲಿ ನರೇಂದ್ರ ಮೋದಿ ಸ್ಟಾರ್ ಪ್ರಚಾರಕರಾಗಿದ್ದಾರೆ. ಇನ್ನು ಮುಂದೆ ರೋಡ್ ಶೋಗಳಲ್ಲಿ ಭಾಗವಹಿಸುವುದರ ಬಗ್ಗೆಯೂ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.ಪ್ರಧಾನಿ ಮೋದಿಯವರೊಂದಿಗೆ ಯಾರೊಬ್ಬರೂ ಆಪ್ತವಾಗಿ ವ್ಯವಹರಿಸುವಂತಿಲ್ಲ, ಪ್ರಧಾನಿ ಭೇಟಿ ಮಾಡುವ ವ್ಯಕ್ತಿಗಳನ್ನು ತೀವ್ರ ತಪಾಸಣೆಗೊಳಪಡಿಸಲಾಗುವುದು ಎಂದು ಭದ್ರತಾ ಮೂಲಗಳು ಹೇಳಿವೆ.