ಕೋಝಿಕ್ಕೋಡ್: ಸಮಸ್ತ ಮತ್ತು ಮುಸ್ಲಿಂ ಲೀಗ್ ನಡುವಿನ ವಿವಾದ ಸಾರ್ವಜನಿಕ ಘರ್ಷಣೆಗೆ ತಿರುಗಿದೆ. ಸಾದಿಖಲಿ ತಂಙಳರ ವಿದ್ವತ್ತನ್ನು ಪ್ರಶ್ನಿಸಿದ ಸಮಸ್ತ ಕಾರ್ಯದರ್ಶಿ ಉಮರ್ ಫೈಝಿ ಮುಕ್ಕಂ ಅವರಿಗೆ ಸಮಸ್ತದ ಲೀಗ್ ಬೆಂಬಲಿತ ಬಣವು ಬಹಿರಂಗ ಸವಾಲು ಹಾಕಿದೆ. ಈ ನಿಟ್ಟಿನಲ್ಲಿ ಇಂದು ಸಮಸ್ತ ಸಮನ್ವಯ ಸಮಿತಿ ಎಡವಣ್ಣಪಾರದಲ್ಲಿ ಆಯೋಜಿಸಿರುವ ಸಾರ್ವಜನಿಕ ಸಭೆಯು ಸಮರ ಘೋಷಣೆಯಾಗಲಿದೆ. ಉಮರ್ ಫೈಝಿ ಅವರನ್ನು ಉಚ್ಚಾಟಿಸಬೇಕೆಂಬ ಆಗ್ರಹ ಸಭೆಯಲ್ಲಿ ಪ್ರಸ್ತಾಪವಾಗಲಿದೆ.
ಏತನ್ಮಧ್ಯೆ, ಸಮಸ್ತದ ವಿದ್ವತ್ ಸಭೆಯಾದ ಮುಶಾವರದ ಲೀಗ್ ವಿರೋಧಿ ಬಣವು ಉಮರ್ ಫೈಝಿ ಅವರಿಗೆ ಬಹಿರಂಗ ಬೆಂಬಲಕ್ಕೆ ನಿಂತಿದೆ. ಉಮರ್ ಫೈಝಿ ಹಾಗೂ ಸಮಸ್ತ ಅಧ್ಯಕ್ಷ ಜೆಫ್ರಿ ಮುತ್ತುಕೋಯ ತಂಙಳ್ ಅವರ ವಿರುದ್ಧ ದುರುದ್ದೇಶಪೂರಿತ ಅಪಪ್ರಚಾರವನ್ನು ಸಹಿಸುವುದಿಲ್ಲ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಮುಸ್ಲಿಂ ಲೀಗ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ಎ ಸಲಾಂ ಮತ್ತಿತರರು ಈ ಸಂಘರ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ.
ಮುಜಾಹಿದ್ ಮತ್ತು ಜಮಾಅತೆ ಇಸ್ಲಾಮಿ ವಿಚಾರವಾದಿಗಳು ಸಮಸ್ತದಲ್ಲಿ ಸಮಸ್ಯೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂಬುದಾಗಿದೆ ಲೀಗ್ ವಿರೋಧಿ ಬಣದ ವಾದ. ಏತನ್ಮಧ್ಯೆ, ಮುಕ್ಕಂ ಉಮರ್ ಫೈಝಿ ವಿರುದ್ಧ ಮುಸ್ಲಿಂ ಲೀಗ್ ತನ್ನ ನಿಲುವನ್ನು ಕಠಿಣಗೊಳಿಸುತ್ತಿದೆ. ಉಮರ್ ಫೈಝಿ ವಿರುದ್ಧ ಕ್ರಮ ಕೈಗೊಳ್ಳಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ, ಪ್ರತಿಪಕ್ಷದ ಉಪನಾಯಕ ಪಿ.ಕೆ.ಕುಂಞಾಲಿಕುಟ್ಟಿ ಅವರು, ಎಲ್ಲ ಜನರ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳುವ ಭರವಸೆ ಇದೆ. ವಿಷಯಗಳನ್ನು ಕೈಮೀರಿ ಹೋಗದಂತೆ ನೋಡಿಕೊಳ್ಳಬೇಕಿದೆ. ವಿವಾದಕ್ಕೆ ಉತ್ತೇಜನ ನೀಡುವ ಉಮರ್ ಫೈಝಿ ಅವರ ಹೇಳಿಕೆಯನ್ನು ಸಮಸ್ತ ಗಂಭೀರವಾಗಿ ಪರಿಗಣಿಸಲಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದರು.ಫೈಝಿಯ ಹೇಳಿಕೆಯು ಸಮಾಜದಲ್ಲಿ ಸ್ಪರ್ಧೆಯನ್ನು ಬೆಳೆಸುತ್ತದೆ. ವಿಷಯಗಳು ಕೈ ಮೀರಬಾರದು ಎಂದೂ ಕುಂಞಾಲಿಕುಟ್ಟಿ ಕೇಳಿಕೊಂಡರು.
ಧರ್ಮದ ನಿಯಮಗಳು ಮತ್ತು ನಿಬಂಧನೆಗಳನ್ನು ವಿಶ್ವಾಸಿಗಳಿಗೆ ಮನವರಿಕೆ ಮಾಡುವುದು ವಿದ್ವಾಂಸರ ಕರ್ತವ್ಯವಾಗಿದೆ ಮತ್ತು ಅವರ ಉಪನ್ಯಾಸಗಳನ್ನು ತಿರುಚಿದ್ದು ಮತ್ತು ಪೊಲೀಸ್ ಕ್ರಮಕ್ಕೆ ಎಳೆದಿರುವುದು ವಿಷಾದನೀಯ ಎಂದು ಉಮರ್ ಫೈಝಿ ಅವರನ್ನು ಬೆಂಬಲಿಸುವ ಎಲ್ಲಾ ಮುಶಾವರ ಸದಸ್ಯರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಧಾರ್ಮಿಕ ವಿದ್ವಾಂಸರು ಮತ್ತು ಪ್ರವಾದಿ ಕುಟುಂಬವನ್ನು ಅವಮಾನಿಸುವ ಮತ್ತು ಅಪಹಾಸ್ಯ ಮಾಡುವ ಪ್ರವೃತ್ತಿ ಬೆಳೆಯುತ್ತಿರುವುದು ಆತಂಕ ಸೃಷ್ಟಿಸಿದೆ.ಇಂತಹಾ ಕೃತ್ಯದಲ್ಲಿ ಭಾಗಿಯಾಗಿರುವ ರಾಜಕೀಯ ಪಕ್ಷಗಳ ಜವಾಬ್ದಾರಿಯುತ ವ್ಯಕ್ತಿಗಳ ಬಗ್ಗೆ ಗಮನಕ್ಕೆ ತರಲಾಗಿತ್ತಾದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಯು.ಎಂ. ಅಬ್ದುರ್ರಹ್ಮಾನ್ ಮುಸ್ಲಿಯಾರ್, ವಾಕೋಡ್ ಮೊಯ್ದೀನ್ ಕುಟ್ಟಿ ಫೈಝಿ, ಎ.ವಿ. ಅಬ್ದುರ್ರಹ್ಮಾನ್ ಮುಸ್ಲಿಯಾರ್, ಒಳವಣ್ಣ ಅಬೂಬಕರ್ ದಾರಿಮಿ, ಪಿ.ಎಂ. ಅಬ್ದುಸ್ಸಲಾಂ ಬಾಖವಿ ವಡಕ್ಕೆಕಾಡ್ , ಐ.ಬಿ. ಉಸ್ಮಾನ್ ಫೈಝಿ ಎರ್ನಾಕುಲಂ, ಬಿ.ಕೆ. ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಅಬ್ದುಸಲಾಂ ದಾರಿಮಿ ಆಲಂಪಾಡಿ ಹಾಗೂ ಉಸ್ಮಾನುಲ್ ಫೈಝಿ ತೋಡಾರ್ ಹೇಳಿಕೆಯಲ್ಲಿ ಸಹಿ ಹಾಕಿದ್ದಾರೆ.