janadhvani

Kannada Online News Paper

ಮದರಸಾಗಳ ವಿರುದ್ಧ ಎನ್‌ಸಿಪಿಸಿಆರ್‌ ಆದೇಶ- ಸುಪ್ರೀಂ ಕೋರ್ಟ್ ತಡೆ

ಆಯೋಗ ಕಳಿಸಿದ ಪತ್ರ ಪ್ರಕಾರ, ಯುಪಿ ಮತ್ತು ತ್ರಿಪುರಾ ಸರ್ಕಾರಗಳು ತೆಗೆದುಕೊಂಡ ಕ್ರಮಗಳನ್ನೂ ಸುಪ್ರೀಂ ಕೋರ್ಟ್ ತಡೆಹಿಡಿದಿದೆ

ನವದೆಹಲಿ: ಮದರಸಾಗಳ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ (ಎನ್‌ಸಿಪಿಸಿಆರ್‌)ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಿರುವ ಪತ್ರದಲ್ಲಿ ಯಾವುದೇ ಮುಂದಿನ ಕ್ರಮ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ.

ಆಯೋಗ ಕಳಿಸಿದ ಪತ್ರ ಪ್ರಕಾರ, ಯುಪಿ ಮತ್ತು ತ್ರಿಪುರಾ ಸರ್ಕಾರಗಳು ತೆಗೆದುಕೊಂಡ ಕ್ರಮಗಳನ್ನೂ ಸುಪ್ರೀಂ ಕೋರ್ಟ್ ತಡೆಹಿಡಿದಿದೆ. ಯುಪಿ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಮುಸ್ಲಿಂ ಸಂಘಟನೆ ಜಮ್ಇಯ್ಯತ್ ಉಲೇಮಾ-ಇ-ಹಿಂದ್ ಪರ ಮಂಡಿಸಿದ ವಾದವನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಪರಿಗಣಿಸಿದೆ. ನ್ಯಾಯಾಲಯವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್‌ ಕಳುಹಿಸಿದೆ.

ವಾದ ಆಲಿಸಿದ ನ್ಯಾಯಾಲಯ ಎನ್‌ಸಿಪಿಸಿಆರ್ ಜೂನ್ 7 ಮತ್ತು ಜೂನ್ 25ರಂದು ಹೊರಡಿಸಿರುವ ಆದೇಶದನ್ವಯ ಕ್ರಮ ಜರುಗಿಸದಂತೆ ಸೂಚಿಸಿದೆ.

ಮದರಸಾಗಳಲ್ಲಿನ ಶಿಕ್ಷಣದ ವಿಧಾನವು ವಿದ್ಯಾರ್ಥಿಗಳ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರಗಳನ್ನು ಕಳುಹಿಸಿತ್ತು.

ಶಿಕ್ಷಣ ಹಕ್ಕು ಕಾಯಿದೆ, 2009 ರಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ನೀಡಲಾದ ರಿಯಾಯಿತಿಗಳು ಧಾರ್ಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣವನ್ನು ನಿರಾಕರಿಸುವಲ್ಲಿ ಕಾರಣವಾಗಿವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮದರಸಾಗಳು ಶಿಕ್ಷಣ ಸಂಸ್ಥೆಗಳಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ರಾಜ್ಯ ಸರಕಾರ ಮದರಸಾ, ಮದರಸಾ ಮಂಡಳಿಗಳಿಗೆ ನೆರವು ನೀಡುವುದನ್ನು ನಿಲ್ಲಿಸಬೇಕು. ಮದರಸಾ ಮಂಡಳಿಗಳನ್ನು ಮುಚ್ಚಬೇಕು. ಮುಸ್ಲಿಮೇತರ ಮಕ್ಕಳು ಮದರಸಾಗಳಲ್ಲಿ ಓದುತ್ತಿದ್ದರೆ, ಅವರನ್ನು ಸರ್ಕಾರಿ ಶಾಲೆಗಳಿಗೆ ವರ್ಗಾಯಿಸಬೇಕು, ಮದರಸಾಗಳಲ್ಲಿ ಓದುತ್ತಿರುವ ಮುಸ್ಲಿಂ ಮಕ್ಕಳೂ ಸಾರ್ವಜನಿಕ ಶಿಕ್ಷಣವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು ಮುಂತಾದ ನಿರ್ದೇಶನಗಳನ್ನು ಪತ್ರದಲ್ಲಿ ತಿಳಿಸಲಾಗಿತ್ತು.

error: Content is protected !! Not allowed copy content from janadhvani.com