janadhvani

Kannada Online News Paper

ಕಾಂಗ್ರೆಸ್-ಜೆಡಿಎಸ್‍ ಸಚಿವರ ಪ್ರಮಾಣ ವಚನ -ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ

ಬೆಂಗಳೂರು, ಜೂ.6-ಹಲವರ ವಿರೋಧ ಹಾಗೂ ಅಸಮಾಧಾನದ ನಡುವೆಯೇ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್-ಜೆಡಿಎಸ್‍ನಿಂದ ಹಲವು ಮಂದಿ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸುವ ಮೂಲಕ ರಾಜ್ಯದಲ್ಲಿ ವಿದ್ಯುಕ್ತವಾಗಿ ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು.

ಜೆಡಿಎಸ್ ಪಕ್ಷದಿಂದ ಸಚಿವರಾಗಿ– ಎಚ್.ಡಿ.ರೇವಣ್ಣ, ಬಂಡೆಪ್ಪ ಕಾಶೆಂಪುರ, ಜಿ.ಟಿ.ದೇವೇಗೌಡ, ಮನಗೂಳಿ, ಗುಬ್ಬಿ ಶ್ರೀನಿವಾಸ್, ವೆಂಕಟರಾವ್ ನಾಡಗೌಡ, ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಎನ್.ಮಹೇಶ್, ಡಿ.ಸಿ. ತಮ್ಮಣ್ಣ.ಕಾಂಗ್ರೆಸ್ ಪಕ್ಷದ ಸಚಿವರು: ಆರ್ .ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಕೆ.ಜೆ. ಜಾರ್ಜ್, ಕೃಷ್ಣಬೈರೇಗೌಡ, ಶಿವಶಂಕರ ರೆಡ್ಡಿ, ರಮೇಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಯು.ಟಿ.ಖಾದರ್, ಜಮೀರ್ ಅಹ್ಮದ್ , ಶಿವಾನಂದ ಪಾಟೀಲ್ , ವೆಂಕಟರಮಣಪ್ಪ, ರಾಜಶೇಖರ್ ಪಾಟೀಲ್, ಪುಟ್ಟರಂಗಶೆಟ್ಟಿ, ಶಂಕರ್, ಜಯಮಾಲ.

ಮಧ್ಯಾಹ್ನ 2 ಗಂಟೆ 12 ನಿಮಿಷಕ್ಕೆ ಸರಿಯಾಗಿ ಕನ್ಯಾ ಲಗ್ನದಲ್ಲಿ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಿ.ಆರ್.ವಾಲಾ ಅವರು ಅಧಿಕಾರದ ಗೌಪ್ಯತೆ ಬೋಧಿಸಿದರು.  ಕಾಂಗ್ರೆಸ್‍ನಿಂದ 15 ಮಂದಿ ಹಾಗೂ ಜೆಡಿಎಸ್‍ನಿಂದ 8 ಮಂದಿ ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಂಪುಟದಲ್ಲಿ ಯಾವುದೇ ರೀತಿಯ ಭಿನ್ನಮತ, ಅಸಮಾಧಾನಕ್ಕೆ ಅವಕಾಶ ನೀಡದಂತೆ ಎಚ್ಚರಿಕೆ ಹೆಜ್ಜೆ ಇಟ್ಟಿರುವ ಉಭಯ ಪಕ್ಷಗಳು ಇನ್ನು ಕೆಲವು ಖಾತೆಗಳನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಇಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಮುಖ್ಯವಾಗಿ ಜಾತಿ, ಪ್ರಾದೇಶಿಕತೆ, ಪಕ್ಷಕ್ಕೆ ಸಲ್ಲಿಸಿರುವ ಸೇವೆ ಹಾಗೂ 2019ರ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡೇ ಹಿರಿ-ಕಿರಿಯರನ್ನೊಳಗೊಂಡ ಸಮತೋಲನದ ಸಂಪುಟ ವಿಸ್ತರಣೆ ಮಾಡಿರುವುದು ವಿಶೇಷವಾಗಿದೆ.ಸದನದಲ್ಲಿ ಪ್ರತಿಪಕ್ಷಗಳನ್ನು ಸಮರ್ಪಕವಾಗಿ ಎದುರಿಸಲು ಹಿರಿಯರು ಹಾಗೂ ಕಿರಿಯರಿಗೂ ಕೂಡ ಮಣೆ ಹಾಕಲಾಗಿದೆ. ಮುಖ್ಯವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಎರಡು ಪ್ರಮುಖ ಸಮುದಾಯಗಳಾದ ಲಿಂಗಾಯಿತ ಹಾಗೂ ಒಕ್ಕಲಿಗ ಜಾತಿಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದಾರೆ.
ಕಳೆದ ರಾತ್ರಿಯಿಂದ ನಡೆದ ಸರ್ಕಸ್ ಬೆಳಗ್ಗೆ 11 ಗಂಟೆವರೆಗೂ ಮುಂದುವರೆದಿತ್ತು. ಎರಡು ಪಕ್ಷಗಳಿಂದ ಸಚಿವರ ಪಟ್ಟಿಗೆ ಅಂತಿಮ ಸ್ಪರ್ಶ ನೀಡಲು ಮುಖಂಡರು ಹರಸಾಹಸ ನಡೆಸಿದರು. ಅಂತಿಮವಾಗಿ ಕಾಂಗ್ರೆಸ್ ಹಾಗೂ ಎಐಸಿಸಿ ವತಿಯಿಂದ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವತಿಯಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಚಿವ ಸಂಪುಟ ಪಟ್ಟಿಗೆ ಅಂತಿಮ ಸ್ಪರ್ಶ ನೀಡಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಟ್ಟರು.

error: Content is protected !! Not allowed copy content from janadhvani.com