janadhvani

Kannada Online News Paper

ಧರ್ಮಾಧಾರಿತ ಸಾರ್ವಜನಿಕ ವಲಯದ ಆಯ್ಕೆ ಖಂಡನೀಯ- ಮುಸ್ಲಿಂ ಕೊಡಿನೇಶನ್

ಇಷ್ಟೆಲ್ಲಾ ಅನಾಹುತಗಳು ನಡೆಯುವಾಗ ವಿಪರ್ಯಾಸ ನಮ್ಮ ರಾಜ್ಯವನ್ನು ಆಳುತ್ತಿರುವುದು ಜಾತ್ಯತೀತತೆ ಎಂಬ ಹಣ ಪಟ್ಟಿರುವ ಪಕ್ಷ ಎಂಬುದಾಗಿದೆ.

ಮಂಗಳೂರಿನ ಕಂಕನಾಡಿಯ ಒಳ ರಸ್ತೆಯಲ್ಲಿರುವ ಕಂಕನಾಡಿ ಮಸೀದಿಯಲ್ಲಿ ಶುಕ್ರವಾರ ಜುಮಾ ನಮಾಝಿಗಾಗಿ ಮಸೀದಿಯು ತುಂಬಿರುವ ಕಾರಣ ( ಇಸ್ಲಾಂ ಧರ್ಮದ ಪ್ರಕಾರ ಮಸೀದಿಯ ಒಳಗೆ ನಮಾಝಿಗೆ ಪಾವಿತ್ರ್ಯತೆ ಜಾಸ್ತಿ ಎಂಬುದನ್ನು ಗಮನಿಸಬೇಕು)
ಕೆಲವೊಂದು ಯುವಕರು ಮಸೀದಿಯ ವಠಾರದಲ್ಲಿರುವ ರಸ್ತೆಯಲ್ಲಿ (ಆ ಸಮಯದಲ್ಲಿ ಪ್ರಸ್ತುತ ಮಾರ್ಗದಲ್ಲಿ ಸೈಕಲ್ ಸವಾರರನ್ನೂ ಕಾಣಲು ಕಷ್ಟ ಸಾಧ್ಯ) ನಮಾಝ್ ಮಾಡಿದ್ದಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ದಾರ್ಮಿಕ ಆಚರಣೆ ಎಂಬ ಕಾರಣಕ್ಕಾಗಿ ಸುಮೋಟೋ ಕೇಸ್ ದಾಖಲಿಸಿದ್ದನ್ನು ಗಮನಿಸಿದರೆ, ಸಾರ್ವಜನಿಕ ವಲಯಗಳನ್ನು ಧರ್ಮವನ್ನು ನೋಡಿ ಆಯ್ಕೆ ಮಾಡಲಾಗುತ್ತಿದೆಯೇ ಎಂಬ ಸಂಶಯ ಮೂಡಿ ಬರುತ್ತಿದೆ,
ಕಾರಣ ಎಲ್ಲಾ ಧರ್ಮದವರ ಧಾರ್ಮಿಕ ಕೇಂದ್ರಗಳಲ್ಲಿ ಇದು ಸಹಜವಾಗಿ ಕಾಣುತ್ತಿರುವ ಒಂದು ದೃಶ್ಯವಾಗಿದೆ ಎಂದು ತಬೂಕ್ ದಾರಿಮಿ
(ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಕೊಡಿನೇಶನ್ ಸಮಿತಿ) ತಮ್ಮ ಫೇಸ್‌ಬುಕ್ ಖಾತೆ ಮೂಲಕ ತಮ್ಮ ಖಂಡನೆ ವ್ಯಕ್ತಪಡಿಸಿದ್ದಾರೆ.

ಉದಾಹರಣೆಗೆ ಮೂರ್ನಾಲ್ಕು ಮೆಡಿಕಲ್ ಕಾಲೇಜು ಇರುವುದರಿಂದ ದೇಶ ವಿದೇಶಗಳಿಂದ ಬಂದ ನೂರಾರು ಜನರು ಸಂಚರಿಸುವ ತೊಕ್ಕೊಟು ದೇರಳಕಟ್ಟೆಯ ಮದ್ಯದಲ್ಲಿರುವ ರಸ್ತೆಯಲ್ಲಿ ದಾರ್ಮಿಕ ಹಬ್ಬಗಳ ಕಾರಣದಿಂದ ದಿವಸಗಳ ಕಾಲ ರಸ್ತೆ ತಡೆ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವುದು ಮಾತ್ರವಲ್ಲದೆ,
ಡಿ ಜೆ ಹಾಕಿ ಡ್ಯಾನ್ಸು ಮಾಡಿ ಪರಿಸರದವರಿಗೂ ತೊಂದರೆ ಉಂಟುಮಾಡುವುದು ಕಂಡು ಬರುತ್ತಿದೆ.

ಅದೇ ರೀತಿ ಮಂಗಳೂರಿನ ಹೃದಯ ಭಾಗದಲ್ಲಿರುವ ಕೆಲವೊಂದು ದೇವಸ್ಥಾನಗಳ ಮುಂಬಾಗದಲ್ಲಿ ಭಕ್ತಾದಿಗಳ ವಾಹನಗಳು ಸಾಲುಗಟ್ಟಿ ನಿಂತಿರುವುದರಿಂದ
ಸಾರ್ವಜನಿಕರಿಗೆ ತೊಂದರೆ ಆಗುವುದು, ದೀಪಾವಳಿಗೆ ಮಾಲಿನ್ಯಕಾರಕ ಪಟಾಕಿ ಸಿಡಿಸಲು ಕಾನೂನಿನ ತೊಡಕಿದ್ದರೂ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಕಿರುಕುಳ ನೀಡುವುದು, ಗಣೇಶ ಉತ್ಸವದ ಹೆಸರಲ್ಲಿ ದಿನಗಳ ಕಾಲ ರಸ್ತೆ ತಡೆ ಮಾಡುವುದು ವಾಡಿಕೆಯಾಗಿದೆ.

ಇವೆಲ್ಲವನ್ನೂ ಕಂಡೂ ಕಾಣದಂತೆ, ಮೋಬೈಲ್ ಕೈಯಲ್ಲಿದ್ದರೂ ವೀಡಿಯೋ ಮಾಡದೆ, ಯಾವುದೇ ಅಪಸ್ವರ ಎತ್ತದೇ ಇರುವುದು ಒಂದು ವರ್ಗದವರ ಅಸಹಾಯಕತೆ ಅಲ್ಲ, ಬದಲಾಗಿ ನಮ್ಮ ನಾಡು
“ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ” ಆದ್ದರಿಂದ ಆ ತೋಟಕ್ಕೆ ದಕ್ಕೆ ಬರಬಾರದು ಎಂಬ ಉದ್ದೇಶದಿಂದ ಆಗಿದೆ ಎಂಬುದನ್ನು ಸಂಬಂಧ ಪಟ್ಟವರು ಅರಿತರೆ ಒಳಿತು.

ಜನಸಾಮಾನ್ಯರು ತುಂಬಿ ತುಳುಕುತ್ತಿರುವ ರೈಲ್ವೆ ನಿಲ್ದಾಣ ಸಾರ್ವಜನಿಕ ಸ್ಥಳಗಳಲ್ಲವೇ ? ಹೌದು ಎಂದಾದರೆ ಅಲ್ಲಿ ಭಜನೆ ಮಾಡಿದವರ ವಿರುದ್ಧ ಯಾಕೆ ಸೊಮೋಟೊ ಕೇಸ್ ದಾಖಲಾಗಿಲ್ಲ? ಜನರ ಹಿತಕ್ಕಾಗಿ ಅರಸಾಹಸ ಪಡುವ ಪೋಲೀಸ್ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ಬೈಯ್ದಾಗ ಅಂತಹವರ ವಿರುದ್ಧ ಯಾಕೆ ಕೇಸು ದಾಖಲಾಗಿಲ್ಲ?
ಕಾನೂನು ಕ್ರಮ ಜರುಗಿಸುವುದು ಟೋಪಿ ಕುಂಕುಮ ನೋಡಿ ಎಂದಾದರೆ ನಮ್ಮ ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಬಗ್ಗೆ ಆಲೋಚನೆ ಪಡಬೇಕಾದ ಅನಿವಾರ್ಯತೆ ಜಾತ್ಯಾತೀತರಿಗಿದೆ.

ಇಷ್ಟೆಲ್ಲಾ ಅನಾಹುತಗಳು ನಡೆಯುವಾಗ ವಿಪರ್ಯಾಸ ನಮ್ಮ ರಾಜ್ಯವನ್ನು ಆಳುತ್ತಿರುವುದು
ಜಾತ್ಯತೀತತೆ ಎಂಬ ಹಣ ಪಟ್ಟಿರುವ ಪಕ್ಷ ಎಂಬುದಾಗಿದೆ.
ಇಂತಹದೇ ಶುಕ್ರವಾರದ ಜುಮ್ಮಾ ನಮಾಝಿನ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಲು ಅಹ್ವಾನ ಕೊಟ್ಟಿದ್ದು ಮಾತ್ರವಲ್ಲದೆ ಮತ ಚಲಾಯಿಸಲು ಅನುಕೂಲವಾಗುವ ರೀತಿಯಲ್ಲಿ ಜುಮಾ ನಮಾಝಿನ ಸಮಯ ಬದಲಾಯಿಸಿದ್ದು ನಾಯಕರು ಎಂದೆನಿಸಿದವರಿಗೆ ಇದುವರೆಗೂ ನೆನಪಿಗೆ ಬಾರದಿರುವುದು ಮಾತ್ರ ಮುಂದಕ್ಕೆ ಮತದಾರ ಪ್ರಭುಗಳು ಚಿಂತಿಸಬೇಕಾದ ವಿಷಯ.

ಕಾಂಗ್ರೆಸ್ ಪಕ್ಷದಲ್ಲಿ ಕೆಲವೊಂದು ಸಂಘಿ ಮನಸ್ಥಿತಿ ಇರುವವರು ಇನ್ನೂ ಇದ್ದಾರೆ ಎಂದು ಮಾಜಿ ಸ್ಪೀಕರ್ ಗೌರವಾನ್ವಿತ ರಮೇಶ್ ಕುಮಾರ್ ರವರು ಹೇಳಿದ್ದಕ್ಕೆ ಇದು ತಾಜಾ ಉದಾಹರಣೆಯಾಗಿದೆ.
ಅಂತಸ್ತು ಅಬಿಮಾನ ಸ್ನೇಹ ಎಲ್ಲವನ್ನೂ ಅಡವಿಟ್ಟು ಒಂದು ನಿರ್ದಿಷ್ಟ ಪಕ್ಷಕ್ಕೆ ಮತ ಚಲಾಯಿಸಲು ಆಹ್ವಾನ ಕೊಟ್ಟು 98 % ಮತ ಚಲಾವಣೆ ಮಾಡಿಸಿ ನೇತಾರರಾಗಿ ಕಳುಹಿಸಿದ್ದು ಬರೇ ರಾಜಾ ರೋಷವಾಗಿ ತಿರುಗಾಡಲು, ಹಾಗೂ ಕುಟುಂಬಕ್ಕೆ ಮತ್ತು ಕೆಲವು ಬೆರಳೆಣಿಕೆಯ ಆಪ್ತರಿಗೆ ಮಾತ್ರ ಉಪಯೋಗ ವಾಗಲು ಮಾತ್ರ ಅಲ್ಲ, ಬದಲಾಗಿ ಸಮುದಾಯಕ್ಕೆ ಆಗುವ ಅನ್ಯಾಯದ ವಿರುದ್ಧ ಕಾನೂನಾತ್ಮಕವಾಗಿ ಸ್ಫಂದಿಸಲು ಆಗಿದೆ ಎಂಬುದನ್ನು ಮರೆಯಬಾರದು.
ಚುನಾವಣೆ ಇನ್ನೂ ಬರುತ್ತದೆ ಎಂಬ ಕನಿಷ್ಠ ಜ್ಞಾನವನ್ನಾದರೂ ಇಟ್ಟು ಸಂಭಂದ ಪಟ್ಟ ರಾಜಕಾರಣಿಗಳು ಇದರ ಬಗ್ಗೆ ಧ್ವನಿ ಎತ್ತಬೇಕು.

error: Content is protected !! Not allowed copy content from janadhvani.com