janadhvani

Kannada Online News Paper

ತುಮಕೂರು: ಬೆಳ್ತಂಗಡಿಯ ಮೂವರ ಹತ್ಯೆ ಪ್ರಕರಣ- 6 ಮಂದಿ ಆರೋಪಿಗಳ ಬಂಧನ

ತಮಗೆ ಜಮೀನಿನಲ್ಲಿ ಭಾರೀ ಪ್ರಮಾಣದ ಚಿನ್ನ ಸಿಕ್ಕಿದೆ, ಅದನ್ನು ಕಡಿಮೆ ಬೆಲೆಗೆ ಕೊಡುವುದಾಗಿ ಹೇಳಿ ಈ ತಂಡ ವ್ಯವಹಾರ ಕುದುರಿಸಿದೆ ಎನ್ನಲಾಗಿದೆ.

ಮಂಗಳೂರು: ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಮೃತಪಟ್ಟಿರುವ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದ್ದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ಸೊ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45), ಕುವೆಟ್ಟು ಗ್ರಾಮದ ಮದ್ದಡ್ಕ ನಿವಾಸಿ ಇಸಾಕ್(56), ಶಿರ್ಲಾಲು ಗ್ರಾಮದ ಸಿದ್ದೀಕ್(34) ಮೂವರು ಬಾಡಿಗೆ ಮಾಡಿಕೊಂಡು ತುಮಕೂರಿಗೆ ತೆರಳಿದ್ದರು ಎನ್ನಲಾಗಿದೆ.

ಪ್ರಕರಣದ ಆರೋಪಿಗಳು ಬೆಳ್ತಂಗಡಿಗೆ ಬಂದು ವ್ಯವಹಾರ ಕುದುರಿಸಿದ್ದರು ಎಂಬ ಅನುಮಾನವೂ ಇದೀಗ ವ್ಯಕ್ತವಾಗುತ್ತಿದೆ. ತಮಗೆ ಜಮೀನಿನಲ್ಲಿ ಭಾರೀ ಪ್ರಮಾಣದ ಚಿನ್ನ ಸಿಕ್ಕಿದೆ, ಅದನ್ನು ಕಡಿಮೆ ಬೆಲೆಗೆ ಕೊಡುವುದಾಗಿ ಹೇಳಿ ಈ ತಂಡ ವ್ಯವಹಾರ ಕುದುರಿಸಿದೆ ಎನ್ನಲಾಗಿದೆ. ಬೆಳ್ತಂಗಡಿಗೆ ಬಂದಿದ್ದ ದುಷ್ಕರ್ಮಿಗಳ ತಂಡ ಇಸಾಕ್ ಅವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದೆ. ತುಮಕೂರಿನ ಆ ತಂಡ ಇವರನ್ನು ನಂಬಿಸಿ ತುಮಕೂರಿಗೆ ಕರೆಸಿಕೊಂಡಿದೆ ಎಂಬ ಮಾಹಿತಿಗಳು ಲಭ್ಯವಾಗುತ್ತಿವೆ. ತುಮಕೂರಿಗೆ ತೆರಳಿದ್ದ ಈ ಮೂವರನ್ನು ಹತ್ತು ದಿನಗಳಿಗೂ ಹೆಚ್ಚು ಕಾಲ ಅಲ್ಲಿಯೇ ಇರಿಸಿಕೊಂಡ ದುಷ್ಕರ್ಮಿಗಳು ಬಳಿಕ ವಂಚಿಸಿ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ.

ಕೋರಾ ಪೊಲೀಸ್‌ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿದ್ದಾರೆ.

ಮೃತ ಮೂವರ ಕುಟುಂಬಗಳ ಸದಸ್ಯರು, ಸಂಬಂಧಿಕರು ತುಮಕೂರಿಗೆ ತೆರಳಿದ್ದಾರೆ. ಮೂರೂ ಮೃತದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಗುರುತು ಪತ್ತೆ ಅಸಾಧ್ಯವಾಗಿದೆ. ಈ ಹಿನ್ನಲೆಯಲ್ಲಿ ಡಿ.ಎನ್.ಎ. ಪರೀಕ್ಷೆಯ ಬಳಿಕ ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು ಎಂದು ಪೋಲಿಸರು ತಿಳಿಸಿರುವುದಾಗಿ ಮಾಹಿತಿಯಿದೆ.

error: Content is protected !! Not allowed copy content from janadhvani.com