ಹೊಸದಿಲ್ಲಿ: ಕೇಂದ್ರ ಚುನಾವಣಾ ಆಯೋಗವು ಮಾರ್ಚ್ 16, 2024 (ಶನಿವಾರ)ರಂದು ಲೋಕಸಭಾ ಚುನಾವಣೆಯನ್ನು ಘೋಷಿಸಿದ್ದು, ವೇಳಾಪಟ್ಟಿಯನ್ನು ಪ್ರಕಟಿಸಿದೆ. ದೇಶಾದ್ಯಂತ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗದ ಘೋಷಣೆಯಂತೆ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯು 2 ಹಂತದಲ್ಲಿ ನಡೆಯಲಿದೆ.
ಎಪ್ರಿಲ್ 26 ರಂದು ಮೊದಲ ಹಂತ ಮತ್ತು ಮೇ 7 ರಂದು 2ನೇ ಹಂತದ ಮತದಾನ ನಡೆಯಲಿದೆ.ಇದರೊಂದಿಗೆ ರಾಜಾ ವೆಂಕಟಪ್ಪ ನಾಯಕ ಅವರ ನಿಧನದಿಂದ ತೆರವಾಗಿರುವ ಸುರಪುರ ಕ್ಷೇತ್ರದ ಉಪ ಚುನಾವಣೆಯೂ ಅಂದೇ ನಡೆಯಲಿದೆ.
ಶನಿವಾರದಿಂದಲೇ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಫಲಿತಾಂಶ ಬರುವವರೆಗೂ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ದೇಶಾದ್ಯಂತ ಮತ ಎಣಿಕೆ ಒಂದೇ ದಿನ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಬರಲಿದೆ.
ಶನಿವಾರ ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಖ್ಯ ಚುನಾವಾಣಾ ಆಯುಕ್ತ ರಾಜೀವ್ ಕುಮಾರ್, ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಎಪ್ರಿಲ್ 19 ರಂದು ಮೊದಲ ಹಂತದ ಮತದಾನ ನಡೆಯಲಿದ್ದು ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.