ರಫಾ: ಇನ್ನು ಯಾರು ನನ್ನನ್ನು ಉಮ್ಮಾ ಎಂದು ಕರೆಯುತ್ತಾರೆ? ಇದು ಪ್ಯಾಲೆಸ್ತೀನ್ ಮಹಿಳೆ ರಾನಿಯಾ ಅಬು ಅನ್ಸಾ ಅವರ ಪ್ರಶ್ನೆ. 10 ವರ್ಷಗಳ ಕಾಯುವಿಕೆಯ ನಂತರ, ಅನೇಕ ಚಿಕಿತ್ಸೆಗಳ ನಂತರ, ರಾನಿಯಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಇಸ್ರೇಲ್ ದಾಳಿಯಿಂದ ಅವರಿಬ್ಬರು ಮಕ್ಕಳು ಇಂದು ಇಹಲೋಕ ತ್ಯಜಿಸಿದ್ದಾರೆ.
“ಇನ್ನು ಮುಂದೆ ನನ್ನನ್ನು ಯಾರು ಉಮ್ಮಾ ಎಂದು ಕರೆಯುತ್ತಾರೆ? ಯಾರು ನನ್ನನ್ನು ಉಮ್ಮಾ ಎಂದು ಕರೆಯುತ್ತಾರೆ?” ರಾನಿಯಾ ಮಗುವಿನ ರಕ್ತ ಚಿಮ್ಮಿದ ಮುಖಗಳನ್ನು ನೋಡುತ್ತಾ ಕೇಳುತ್ತಿರುವ ದೃಶ್ಯ ಹೃದಯ ವಿದ್ರಾವಕವಾಗಿದೆ. ದಕ್ಷಿಣ ಗಾಜಾದ ರಫಾದಲ್ಲಿ ಕಳೆದ ರಾತ್ರಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಆರು ತಿಂಗಳ ವಯಸ್ಸಿನ ವಿಸ್ಸಾಮ್ ಮತ್ತು ನಯೀಮ್ ಸೇರಿದಂತೆ 12 ಜನರು ಮೃತಪಟ್ಟಿದ್ದಾರೆ. ಗಾಜಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇದುವರೆಗೆ 30,410 ಜನರು ಬಲಿಯಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ.
ಹಮಾಸ್ ಹೋರಾಟಗಾರರ ಮೇಲೆ ದಾಳಿ ನಡೆಸುತ್ತಿರುವುದಾಗಿ ಇಸ್ರೇಲ್ ಹೇಳುತ್ತಿದೆ. ಆದರೆ ನಾವು ಚಿಕ್ಕಪ್ಪನ ಮನೆಯಲ್ಲಿ ವಾಸಿಸುತ್ತಿದ್ದೆವು. ರಾತ್ರಿ 11:00 ಗಂಟೆಗೆ ಮಲಗಿರುವ ಜನರ ಮೇಲೆ ವಾಯುದಾಳಿ ನಡೆಸಿದರು, ಅವರೆಲ್ಲರೂ ನಾಗರಿಕರಾಗಿದ್ದರು. ಒಬ್ಬ ಸೈನಿಕನೂ ಇರಲಿಲ್ಲ ಎಂದು ರಾನಿಯಾ ಹೇಳಿದರು.
“ಶನಿವಾರ ರಾತ್ರಿ 10 ಗಂಟೆಗೆ ಎದ್ದು ಮಗ ನಯೀಮ್ಗೆ ಹಾಲುಣಿಸಿದೆ. ನಂತರ ನಾನು ಇಬ್ಬರೊಂದಿಗೆ ಮಲಗಲು ಹೋದೆ. ಅವರ ತಂದೆ ಕೂಡ ನನ್ನ ಬಳಿಯೇ ಇದ್ದರು. ಒಂದು ಗಂಟೆಯ ನಂತರ ದೊಡ್ಡ ಸ್ಫೋಟ ಸಂಭವಿಸಿದೆ. ನಮ್ಮ ಮನೆ ಕುಸಿದಿದೆ. ನಾನು ಗಂಡ ಮತ್ತು ಮಕ್ಕಳನ್ನು ಕಾಣದೆ ಅಳುತ್ತಿದ್ದೆ. ಗಂಡ ಮತ್ತು ಮಕ್ಕಳು, ಅವರೆಲ್ಲರೂ ಹುತಾತ್ಮರಾದರು. ಅವರ ತಂದೆ ನನ್ನನ್ನು ಒಬ್ಬಂಟಿಯಾಗಿಸಿ ಮಕ್ಕಳನ್ನು ಒಟ್ಟಿಗೆ ಕರೆದೊಯ್ದರು” ತನ್ನ ಮಕ್ಕಳ ಕಂಬಳಿಯನ್ನು ತನ್ನ ಎದೆಗೆ ಅಪ್ಪಿ ಹಿಡಿದು ರಾನಿಯಾ ಹೇಳಿದರು.