ನವದೆಹಲಿ: ಇಸ್ರೇಲ್‌ಗೆ ಗೂಢಚರ್ಯೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕತಾರ್ ನಲ್ಲಿ ಭಾರತೀಯರಾದ ಎಂಟು ಮಂದಿ ನಿವೃತ್ತ ಅಧಿಕಾರಿಗಳನ್ನು ಬಂಧಿಸಿ, ಗಲ್ಲು ಶಿಕ್ಷೆಗೆ ವಿಧಿಸಲ್ಪಟ್ಟು ಭಾರತ ಸರ್ಕಾರದ ಮಧ್ಯಸ್ಥಿಕೆಯಿಂದ ಬಿಡುಗಡೆಗೊಂಡಿರುವ ಸಂಬಧಿತ ಟ್ವೀಟ್ ಒಂದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ತಮ್ಮ ಎರಡು ದಿನಗಳ ಯುಎಇ ಮತ್ತು ಕತಾರ್ ದೇಶಗಳ ಪ್ರವಾಸಕ್ಕೆ ತೆರಳಿರುವ ಮಧ್ಯೆಯೇ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಮಾಡಿರುವ ಟ್ವೀಟ್‌ವೊಂದು, ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
ತಮ್ಮ ಎರಡು ದಿನಗಳ ಭೇಟಿಯ ಬಗ್ಗೆ ಇಂದು ಪ್ರಧಾನಿ ಮೋದಿಯವರು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ನಲ್ಲಿ “ಮುಂದಿನ ಎರಡು ದಿನಗಳಲ್ಲಿ, ನಾನು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಯುಎಇ ಮತ್ತು ಕತಾರ್‌ಗೆ ಭೇಟಿ ನೀಡಲಿದ್ದೇನೆ. ಇದು ಈ ರಾಷ್ಟ್ರಗಳೊಂದಿಗೆ ಭಾರತದ ದ್ವಿಪಕ್ಷೀಯ ಸಂಬಂಧವನ್ನು ಸದೃಢಗೊಳಿಸಲಿದೆ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಯುಎಇಗೆ ಇದು ನನ್ನ 7ನೇ ಭೇಟಿಯಾಗಿದೆ. ಕತಾರ್‌ನ ಅಮೀರ್ ತಮೀಮ್ ಬಿನ್ ಹಮದ್ ಅವರನ್ನೂ ಕೂಡ ಭೇಟಿ ಮಾಡಲಿದ್ದೇನೆ” ಎಂದು ಎಲ್ಲ ವಿವರಗಳನ್ನು ಹಂಚಿಕೊಂಡಿದ್ದರು.
ಈ ಟ್ವೀಟ್‌ಗೆ ಉತ್ತರಿಸಿರುವ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, “ಪ್ರಧಾನಿ ಮೋದಿಯವರು ಕತಾರ್‌ನ ಅಮೀರ್ ಅವರ ಭೇಟಿ ಮಾಡುವ ವೇಳೆ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಕೂಡ ಜೊತೆಗೆ ಕರೆದುಕೊಂಡು ಹೋಗಬೇಕು” ಎಂದು ಆಗ್ರಹಿಸಿದ್ದಾರೆ.
ಇದಕ್ಕೆ ಕಾರಣ ವಿವರಿಸಿರುವ ಸುಬ್ರಮಣಿಯನ್ ಸ್ವಾಮಿ, “ಕತಾರ್‌ನಲ್ಲಿ ಗೂಢಚರ್ಯೆ ಮಾಡಿದ ಆರೋಪದಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿದ್ದ ಎಂಟು ಮಂದಿ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಗಳನ್ನು ಬಿಡುಗಡೆ ಮಾಡುವ ವಿಚಾರಕ್ಕೆ ಸಂಬಂಧಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ರಾಷ್ಟ್ರೀಯ ಭದ್ರತಾ ಸಂಸ್ಥೆಯ ಅಧಿಕಾರಿಗಳು ಕತಾರ್ ಶೈಖ್‌ಗಳ ಮನವೊಲಿಸುವಲ್ಲಿ ವಿಫಲರಾಗಿದ್ದರು.
ಆ ಬಳಿಕ ಕತಾರ್ ಶೈಖ್‌ಗಳ ಜೊತೆಗೆ ಮಾತುಕತೆ ನಡೆಸುವಂತೆ ಮೋದಿಯವರು ಶಾರೂಖ್ ಖಾನ್ ಅವರಲ್ಲಿ ಕೇಳಿಕೊಂಡಿದ್ದರು. ಶಾರೂಖ್ ಖಾನ್ ಅವರ ಮಾತುಕತೆಯ ಫಲವಾಗಿ ನೌಕಾಪಡೆಯ ನಿವೃತ್ತ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿದೆ. ಹಾಗಾಗಿ, ಕತಾರ್ ಅಮೀರ್ ಅವರ ಭೇಟಿಯ ವೇಳೆ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಕೂಡ ಜೊತೆಗೆ ಕರೆದುಕೊಂಡು ಹೋಗಿ” ಎಂದು ಆಗ್ರಹಿಸಿದ್ದಾರೆ.
ಈ ಟ್ವೀಟ್ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಆದರೆ, ಈ ಬಗ್ಗೆ ನಟ ಶಾರೂಖ್ ಖಾನ್ ಆಗಲೀ, ವಿದೇಶಾಂಗ ವ್ಯವಹಾರಗಳ ಸಚಿವಾಲಯವಾಗಲೀ ಯಾವುದೇ ಹೇಳಿಕೆ ನೀಡಿಲ್ಲ. ಸುಬ್ರಮಣಿಯನ್ ಸ್ವಾಮಿಯವರು ನೀಡಿದ ಈ ಹೇಳಿಕೆಯ ಬೆನ್ನಲ್ಲೇ ನಟ ಶಾರೂಖ್ ಖಾನ್ ಕತಾರ್ ಶೈಖ್‌ಗಳ ಜೊತೆಗೆ ಓಡಾಡಿರುವ ಫೋಟೋಗಳು ಕೂಡ ಹರಿದಾಡಿದ್ದು, ವೈರಲ್ ಆಗಿದೆ.
Modi should take Cinema star Sharuk Khan to Qatar with him since after MEA and NSA had failed to persuade the Shiekhs of Qatar, Modi pleaded with Khan to intervene , and thus got an expensive settlement from the Qatar Shiekhs to free our Naval officers.
— Subramanian Swamy (@Swamy39) February 13, 2024