janadhvani

Kannada Online News Paper

ಸೌದಿ ಅರೇಬಿಯಾದಲ್ಲಿ ಭಾರಿ ಉದ್ಯೋಗಾವಕಾಶ- ಶೀಘ್ರದಲ್ಲೇ ನೇಮಕಾತಿ ಆರಂಭ

ಈ ವರ್ಷ, ರಂಜಾನ್ ಸಮಯದಲ್ಲಿ ಯಾತ್ರಿಕರನ್ನು ಸಾಗಿಸುವ ಸೇವೆಗಾಗಿ ವಿದೇಶದಿಂದ ಹಲವಾರು ಜನರನ್ನು ನೇಮಿಸಿಕೊಳ್ಳಲಾಗುತ್ತಿದೆ.

ರಿಯಾದ್: ರಂಜಾನ್ ಸಮಯದಲ್ಲಿ ಉಮ್ರಾ ಯಾತ್ರಿಕರ ಪ್ರಯಾಣವನ್ನು ಸುಲಭಗೊಳಿಸಲು ಸೌದಿ ಅರೇಬಿಯಾ ಸೀಝನಲ್ ಉದ್ಯೋಗಗಳಿಗೆ 8,800 ಕ್ಕೂ ಹೆಚ್ಚು ಚಾಲಕರು ಮತ್ತು ತಂತ್ರಜ್ಞರನ್ನು ನೇಮಿಸಿಕೊಳ್ಳುತ್ತಿದೆ. ಬಸ್‌ಗಳು ಸೇರಿದಂತೆ ವಾಹನಗಳನ್ನು ಓಡಿಸಲು ಚಾಲಕರು ಮತ್ತು ಸಾರಿಗೆ ಕ್ಷೇತ್ರದಲ್ಲಿ ತಾಂತ್ರಿಕ ಕೌಶಲ್ಯ ಹೊಂದಿರುವ ಕಾರ್ಮಿಕರನ್ನು ನೇಮಿಸುವ ಕಾರ್ಯವಿಧಾನಗಳು ಮುಂದಿನ ವಾರ ಪ್ರಾರಂಭವಾಗಲಿವೆ ಎಂದು ಮಕ್ಕಾದಲ್ಲಿರುವ ಜನರಲ್ ಆಟೋಮೊಬೈಲ್ ಸಿಂಡಿಕೇಟ್‌ನ ಕಾರ್ಪೊರೇಟ್ ವ್ಯವಹಾರಗಳ ವಿಭಾಗದ ನಿರ್ದೇಶಕ ಅಬ್ದುಲ್ಲಾ ಅಲ್ ಮಿಹ್ಮಾದಿ ಹೇಳಿದರು.

ಈ ವರ್ಷ, ರಂಜಾನ್ ಸಮಯದಲ್ಲಿ ಯಾತ್ರಿಕರನ್ನು ಸಾಗಿಸುವ ಸೇವೆಗಾಗಿ ವಿದೇಶದಿಂದ ಹಲವಾರು ಜನರನ್ನು ನೇಮಿಸಿಕೊಳ್ಳಲಾಗುತ್ತಿದೆ. ಅದರ ನಂತರ ಹಜ್ ಋತುವಿನ ಕೆಲಸಕ್ಕೆ ಸೀಝನಲ್ ಕಾರ್ಮಿಕರ ಸಿದ್ಧತೆ ಮತ್ತು ನೇಮಕಾತಿ ಪ್ರಾರಂಭವಾಗುತ್ತದೆ. ಈ ಬಾರಿ ಹಜ್ ಸೀಝನ್ ಗೆ 28,000 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಯಾತ್ರಾರ್ಥಿಗಳಿಗೆ ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಂಶಗಳನ್ನು ಕಟ್ಟುನಿಟ್ಟಾದ ತಪಾಸಣೆಗೆ ಒಳಪಡಿಸುವುದರೊಂದಿಗೆ ಹಲವಾರು ಹಂತಗಳಲ್ಲಿ ಸಿಬ್ಬಂದಿಗಳ ನೇಮಕಾತಿಯನ್ನು ಪೂರ್ಣಗೊಳಿಸಲಾಗುವುದು. ಉತ್ತಮ ಗುಣಮಟ್ಟವನ್ನು ಖಾತ್ರಿಪಡಿಸಲಾಗುವುದು. ಇದಕ್ಕಾಗಿ ಮಾನದಂಡಗಳನ್ನು ನಿಗದಿಪಡಿಸಲಾಗಿದೆ.

ಇದನ್ನು ಕಟ್ಟುನಿಟ್ಟಾಗಿ ಅನುಸರಿಸಿ ಮಾತ್ರ ಕಾರ್ಮಿಕರನ್ನು ಆಯ್ಕೆ ಮಾಡಲಾಗುತ್ತದೆ. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಜನರಲ್ ಆಟೋಮೊಬೈಲ್ ಸಿಂಡಿಕೇಟ್ ಅಧಿಕಾರಿಗಳಲ್ಲದೆ, ನೇಮಕಾತಿ ನಡೆಸಲ್ಪಡುವ ವಿದೇಶಗಳ ಲೇಬರ್ ಸೆಲೆಕ್ಷನ್ ಮತ್ತು ಟೆಸ್ಟಿಂಗ್ ಸಮಿತಿಗಳೂ ಭಾಗವಹಿಸಲಿವೆ ಎಂದು ಅಲ್ಮಿಹ್ಮಾದಿ ತಿಳಿಸಿದ್ದಾರೆ.

ಸಾರಿಗೆ ವ್ಯವಸ್ಥೆಗಳು ಮತ್ತು ಸಾರಿಗೆ ಸಂಸ್ಥೆಗಳನ್ನು ಸಮಗ್ರ ಎಲೆಕ್ಟ್ರಾನಿಕ್ ವ್ಯವಸ್ಥೆಯ ಮೂಲಕ ಜೋಡಿಸಲಾಗುತ್ತದೆ. ಹಜ್ ಮತ್ತು ಉಮ್ರಾ ಯಾತ್ರಿಕರು ಮತ್ತು ಹರಮ್‌ಗೆ ಪ್ರಾರ್ಥನೆಗಾಗಿ ಆಗಮಿಸುವವರ ಪ್ರಯಾಣದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಮತ್ತು ನಿಖರವಾದ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುವುದು.

ಈ ವರ್ಷದ ಸೀಝನಲ್ ಕೆಲಸಗಾರರ ಆಗಮನವು ಮುಂದಿನ ತಿಂಗಳ ಐದನೇ ತಾರೀಖಿನಿಂದ (ಶಅಬಾನ್) ಪ್ರಾರಂಭವಾಗುತ್ತದೆ. ಪ್ರಯಾಣಕ್ಕೆ ಸಾಕಷ್ಟು ಸಂಖ್ಯೆಯ ಬಸ್‌ಗಳನ್ನು ಸಿದ್ಧಪಡಿಸಲಾಗಿದೆ. ರಂಜಾನ್ ಸಮಯದಲ್ಲಿ ಯಾತ್ರಾರ್ಥಿಗಳನ್ನು ಹೋಟೆಲ್‌ಗಳಿಂದ ಹರಮ್‌ಗೆ ಸಾಗಿಸುವ ಅಗತ್ಯತೆಗಳನ್ನು ಪೂರೈಸಲು ಮಕ್ಕಾದಾದ್ಯಂತ ಬಸ್‌ಗಳು ಲಭ್ಯವಿರುತ್ತವೆ.

ಸಾರಿಗೆ ಸಂಸ್ಥೆಗಳು ಮತ್ತು ಹೋಟೆಲ್‌ಗಳ ನಡುವಿನ ಒಪ್ಪಂದದ ಆಧಾರದ ಮೇಲೆ ಟಿಕೆಟ್ ದರವನ್ನು ನಿರ್ಧರಿಸಲಾಗುತ್ತದೆ. ಹರಮ್‌ಗೆ ಮತ್ತು ಅಲ್ಲಿಂದ ಹೊರಡುವ ಸಾರ್ವಜನಿಕ ಸಾರಿಗೆ ಬಸ್ ದರಗಳು ಆಕರ್ಷಕವಾಗಿವೆ. ಬಸ್ಸುಗಳು ಮತ್ತು ಸಂಬಂಧಿತ ಸಂಸ್ಥೆಗಳಲ್ಲಿ ಸರ್ಕಾರಿ ಏಜೆನ್ಸಿಗಳ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುವ ಅಗತ್ಯವನ್ನು ಅಲ್ಮಿಹ್ಮದಿ ಒತ್ತಿ ಹೇಳಿದರು.

error: Content is protected !! Not allowed copy content from janadhvani.com