ರಿಯಾದ್: ಗೋಡೆಗಳು, ಮೇಲ್ಛಾವಣಿ ಮತ್ತು ನೆಲವನ್ನು ಬಯಸಿದಂತೆ ಸರಿಸಬಹುದಾದ ಮತ್ತು ಫುಟ್‌ಬಾಲ್ ಪಂದ್ಯದಿಂದ ಸಂಗೀತ ಕಚೇರಿಯವರೆಗೆ ಯಾವುದೇ ಕಾರ್ಯಕ್ರಮಕ್ಕೆ ಸರಿಹೊಂದುವಂತೆ ಬಯಸಿದ ಆಕಾರಕ್ಕೆ ಬದಲಾಯಿಸಬಹುದಾದ ಅದ್ಭುತ ಕ್ರೀಡಾಂಗಣವೊಂದು ಸೌದಿ ಅರೇಬಿಯಾದಲ್ಲಿ ಬರಲಿದೆ.
ರಿಯಾದ್‌ನ ಉದ್ದೇಶಿತ ಖಿದ್ದಿಯ ಎಂಟರ್‌ಟೈನ್‌ಮೆಂಟ್ ಸಿಟಿಯೊಳಗೆ ಬೆಟ್ಟಗಳ ಮೇಲೆ ಅದ್ಭುತವಾದ ಕ್ರೀಡಾಂಗಣವನ್ನು ನಿರ್ಮಿಸಲು ನಿರ್ಧರಿಸಲಾಗಿದೆ, ಇದರಲ್ಲಿ ಫುಟ್‌ಬಾಲ್, ಸಂಗೀತ ಕಚೇರಿಗಳು, ನಾಟಕಗಳು ಮತ್ತು ಡಿಜೆಗಳನ್ನು ಆಯೋಜಿಸಲು ಸಾಧ್ಯವಾಗಲಿದೆ. ಡಿಸ್ನಿ ಲ್ಯಾಂಡ್ ಮಾದರಿಯಲ್ಲಿ ರಿಯಾದ್ ನಗರದ ಮಿತಿಯಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಅತಿದೊಡ್ಡ ಮನರಂಜನಾ ನಗರವಾಗಿದೆ ಖಿದ್ದಿಯ.
ಖಿದ್ದಿಯ, ರಿಯಾದ್ ನಗರದ ಕಾವಲು ಭಟ ತುವೈಖ್ ಪರ್ವತಗಳ ಇಳಿಜಾರು, ಕಣಿವೆಗಳು ಮತ್ತು ಶಿಖರಗಳಲ್ಲಿ ವ್ಯಾಪಿಸಿರುವ ನಗರವಾಗಿದೆ. ಅದರ ಮಧ್ಯದಲ್ಲಿರುವ ಶಿಖರದಲ್ಲಿ ಈ ಹೊಸ ಕ್ರೀಡಾಂಗಣ ನಿರ್ಮಾಣವಾಗಲಿದೆ. ಈ ಕ್ರೀಡಾಂಗಣಕ್ಕೆ ಸೌದಿ ಕ್ರೌನ್ ಪ್ರಿನ್ಸ್ ಅಮೀರ್ ಮುಹಮ್ಮದ್ ಬಿನ್ ಸಲ್ಮಾನ್ ಹೆಸರನ್ನು ಇಡಲಾಗಿದೆ. ರಿಯಾದ್ ನಗರದಿಂದ 40 ನಿಮಿಷಗಳ ಪ್ರಯಾಣ ನಡೆಸಿದರೆ ಖಿದ್ದಿಯ. ಎಂಟರ್‌ಟೈನ್‌ಮೆಂಟ್ ಸಿಟಿ ತಲುಪಲಿದೆ. ಅದರ ಹೃದಯಭಾಗದಲ್ಲಿ, 200 ಮೀಟರ್ ಎತ್ತರದ ತುವೈಖ್ ಪರ್ವತ ಶ್ರೇಣಿಯ ಶಿಖರಗಳಲ್ಲಿ ಒಂದರ ಮೇಲೆ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು.
ಈ ಕ್ರೀಡಾಂಗಣದ ಮೇಲ್ಛಾವಣಿ, ಗೋಡೆಗಳು, ನೆಲ ಮತ್ತು ಬೃಹತ್ ಎಲ್ಇಡಿ ಪರದೆಗಳು ಕಲ್ಪನೆಗೂ ಮೀರಿದ ಅನುಭವಗಳು ಮತ್ತು ಆಶ್ಚರ್ಯಗಳನ್ನು ನೀಡುತ್ತವೆ. ಅವುಗಳನ್ನು ಅಗತ್ಯವಿರುವಂತೆ ಸ್ಥಳಾಂತರಿಸಬಹುದು ಮತ್ತು ಕ್ರೀಡಾಂಗಣದ ನೋಟ ಮತ್ತು ಭಾವನೆಯನ್ನು ಬದಲಾಯಿಸಬಹುದು. ಗೋಡೆಗಳು ಮತ್ತು ಮೇಲ್ಛಾವಣಿಯನ್ನು ಫುಟ್‌ಬಾಲ್‌ನಿಂದ ಥಿಯೇಟರ್ ಪ್ರದರ್ಶನಗಳವರೆಗೆ ಯಾವುದಕ್ಕೂ ಪರಿಪೂರ್ಣ ವೇದಿಕೆಯನ್ನಾಗಿ ಮಾಡಲು ಚಲಿಸಬಹುದು ಅಥವಾ ಮಡಿಸಬಹುದು. ಇದು 2034 ರ ವಿಶ್ವಕಪ್‌ನ ಪ್ರಮುಖ ಕ್ರೀಡಾಂಗಣಗಳಲ್ಲಿ ಒಂದಾಗಲಿದೆ.
ಫುಟ್‌ಬಾಲ್‌ನಿಂದ ಸಂಗೀತ ಕಚೇರಿಗಳು ಸೇರಿದಂತೆ, ಕ್ರೀಡಾಂಗಣದಲ್ಲಿ 25 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯ. ಇದು ಅರ್ಧ ಲಕ್ಷ ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, 60,000 ಮಂದಿಗೆ ಆಸನಗಳ ಸಾಮರ್ಥ್ಯವನ್ನು ಹೊಂದಿರುತ್ತದೆ. ಕ್ರೀಡಾಂಗಣದ ಒಳಗಿನ ಆಟದ ಮೈದಾನವು 120 ಮೀಟರ್ ಉದ್ದ ಮತ್ತು 90 ಮೀಟರ್ ಅಗಲವಿದೆ. ಇದರ ಹೊರತಾಗಿ ರೆಸ್ಟೋರೆಂಟ್‌ಗಳು ಮತ್ತು ಇತರ ವಾಣಿಜ್ಯ ಮಳಿಗೆಗಳು ಇರಲಿದೆ. ಹೊಸ ಕ್ರೀಡಾಂಗಣ ನಿರ್ಮಾಣದಿಂದ ಪ್ರೇಕ್ಷಕರು ಕಾರ್ಯಕ್ರಮದ ಹೃದಯಭಾಗದಲ್ಲಿದ್ದೇವೆ ಎಂಬ ಭಾವನೆ ಮೂಡುತ್ತದೆ ಎಂದು ಖಿದ್ದಿಯಾ ಇನ್ವೆಸ್ಟ್‌ಮೆಂಟ್ ಕಂಪನಿ ತಿಳಿಸಿದೆ. ಕ್ರೀಡಾಂಗಣದ ಮೇಲ್ಛಾವಣಿ ಮತ್ತು ಗೋಡೆಗಳ ಮೇಲಿನ ಎಲ್ ಇಡಿ ಪರದೆಗಳು ಒಂದೂವರೆ ಕಿ.ಮೀ. ಉದ್ದವಿರಲಿದೆ.