ಮಕ್ಕಾ: ಈ ವರ್ಷದ ಭಾರತ-ಸೌದಿ ಹಜ್ ಒಪ್ಪಂದ ಜಾರಿಗೆ ಬಂದಿದೆ. ಭಾರತೀಯ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಮತ್ತು ಸೌದಿ ಹಜ್ ಉಮ್ರಾ ಸಚಿವ ತೌಫೀಖ್ ಅಲ್ ರಬಿಯಾ ಒಪ್ಪಂದಕ್ಕೆ ಸಹಿ ಹಾಕಿದರು. ಒಪ್ಪಂದದ ಪ್ರಕಾರ, ಈ ವರ್ಷ ಭಾರತದಿಂದ 1,75,025 ಯಾತ್ರಿಕರಿಗೆ ಹಜ್ ಯಾತ್ರೆ ಕೈಗೊಳ್ಳಲು ಸಾಧ್ಯವಾಗಲಿದೆ.
ಜಿದ್ದಾಕ್ಕೆ ಆಗಮಿಸಿದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ನೇತೃತ್ವದ ತಂಡ ಸೌದಿ ಹಜ್ ಮತ್ತು ಉಮ್ರಾ ಸಚಿವ ತೌಫೀಖ್ ಅಲ್ ರಬಿಯಾ ಅವರನ್ನು ಭೇಟಿ ಮಾಡಿದೆ. ಭಾರತದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಮತ್ತು ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಔಸಾಫ್ ಸಯ್ಯಿದ್ ಉಪಸ್ಥಿತರಿದ್ದರು.
ಸಭೆಯ ನಂತರ, ಜಿದ್ದಾದಲ್ಲಿರುವ ಸೌದಿ ಹಜ್-ಉಮ್ರಾ ಕಚೇರಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಈ ವರ್ಷದ ಹಜ್ ಒಪ್ಪಂದವನ್ನು ವಿನಿಮಯ ಮಾಡಿಕೊಳ್ಳಲಾಯಿತು. ಹಜ್ಗೆ ಸಂಬಂಧಿಸಿದ ಭಾರತದ ಅತ್ಯುತ್ತಮ ಡಿಜಿಟಲ್ ಸೇವೆಗಳನ್ನು ಸೌದಿ ನಿಯೋಗ ಶ್ಲಾಘಿಸಿತು.
ಮಹ್ರಮ್ ಇಲ್ಲದೆ ಹಜ್ ನಿರ್ವಹಿಸುವ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಪ್ರಸ್ತಾಪಗಳು ಮತ್ತು ಯಾತ್ರಿಕರ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಮತ್ತು ಸುರಕ್ಷತೆ ಸೌಲಭ್ಯಗಳನ್ನು ಹೆಚ್ಚಿಸುವ ಯೋಜನೆಗಳನ್ನು ಸಚಿವರ ಸಭೆಯಲ್ಲಿ ಚರ್ಚಿಸಲಾಯಿತು.