janadhvani

Kannada Online News Paper

ತೀವ್ರ ಅನಾರೋಗ್ಯ: ಊರಿಗೆ ಪ್ರಯಾಣಿಸಲು ಪಾಸ್‌ಪೋರ್ಟ್ ತೊಡಕು- ಕೆಸಿಎಫ್ ಪರಿಹಾರ

ಖಾಸಗೀ ಆಸ್ಪತ್ರೆಯ ವೈದ್ಯರು ಮೂರು ದಿನದೊಳಗೆ ಇವರನ್ನು ಊರಿಗೆ ಕಳಿಸಿಕೊಡಿ ಇಲ್ಲದಿದ್ದರೆ ಇಲ್ಲೇ ಶಸ್ತ್ರಚಿಕಿತ್ಸೆಗೆ ತಯಾರಿ ನಡೆಸಬೇಕು ಎಂದಿದ್ದು, ವಿಳಂಬವಾದರೆ ಜೀವಕ್ಕೆ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ

ಖಮೀಸ್ ಮುಷೈತ್: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬೆಂಗಳೂರಿನ ನಯಾಝ್ ಭಾಯಿ ಎಂಬವರು ಪಾಸ್‌ಪೋರ್ಟ್ ನವೀಕರಣೆಗಾಗಿ ನೀಡಿರುವುದರಿಂದ ಊರಿಗೆ ತೆರಳಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಕೆಸಿಎಫ್ ಕಾರ್ಯಕರ್ತರ ನಿರಂತರ ಪರಿಶ್ರಮದಿಂದ ಸಕಾಲಕ್ಕೆ ಊರಿಗೆ ತೆರಳಲು ಸಾಧ್ಯವಾಯಿತು.

ಸೌದಿ ಅರೇಬಿಯಾದ ಖಮೀಸ್ ಮುಷೈತ್ ನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ನಯಾಝ್ ಭಾಯಿ ಅವರು ಹಠಾತ್ ಆಗಿ ಗಂಭೀರ ರೋಗಕ್ಕೆ ತುತ್ತಾಗಿದ್ದರು. ರೋಗದ ಗಾಂಭೀರ್ಯತೆ ಕಾರಣ ಸರ್ಕಾರೀ ಆಸ್ಪತ್ರೆ ಚಿಕಿತ್ಸೆ ನಿರಾಕರಿಸಿ, ಖಾಸಗೀ ಆಸ್ಪತ್ರೆಗೆ ದಾಖಲಿಸುವಂತೆ ಕೇಳಿದೆ.

ಆದರೆ, ಅವರ ಕೈಯಲ್ಲಿ ಇನ್ಶೂರೆನ್ಸ್ ಇಲ್ಲದ ಕಾರಣ ಬಲು ದೊಡ್ಡ ಆಸ್ಪತ್ರೆ ಶುಲ್ಕವನ್ನು ಪಾವತಿಸುವುದು ಕಷ್ಟಕರವಾದ ಸಂಗತಿ. ಖಾಸಗೀ ಆಸ್ಪತ್ರೆಯ ವೈದ್ಯರು ಮೂರು ದಿನದೊಳಗೆ ಇವರನ್ನು ಊರಿಗೆ ಕಳಿಸಿಕೊಡಿ ಇಲ್ಲದಿದ್ದರೆ ಇಲ್ಲೇ ಶಸ್ತ್ರಚಿಕಿತ್ಸೆಗೆ ತಯಾರಿ ನಡೆಸಬೇಕು ಎಂದಿದ್ದು, ವಿಳಂಬವಾದರೆ ಜೀವಕ್ಕೆ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.

ಊರಿಗೆ ಕಳಿಸಲು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಕಾರ್ಯಕರ್ತರು ಶ್ರಮಿಸುತ್ತಿರುವ ಮಧ್ಯೆ ಅವರ ಪಾಸ್‌ಪೋರ್ಟ್ ನ್ನು ನವೀಕರಣೆಗೆ ನೀಡಿರುವ ವಿವರ ಲಭಿಸಿದೆ. ಕೂಡಲೇ ಭಾರತೀಯ ಕಾನ್ಸುಲೇಟ್ ನ್ನು ಸಂಪರ್ಕಿಸಿದ ಕೆಸಿಎಫ್ ಕಾರ್ಯಕರ್ತರು, ಶೀಘ್ರ ಪಾಸ್‌ಪೋರ್ಟ್ ಲಭಿಸುವಂತೆ ಮನವಿ ಮಾಡಿದ್ದಾರೆ.

ಏತನ್ಮಧ್ಯೆ, ಎಕ್ಸಿಟ್ ಪಾಸ್‌ಪೋರ್ಟ್ ಪಡೆದು ಊರಿಗೆ ಕಳಿಸುವ ಬಗ್ಗೆಯೂ ಆಲೋಚಿಸಿದ್ದು, ಅದರಿಂದ ಮತ್ತೆ ಸೌದಿಗೆ ಬರಲು ಅಸಾಧ್ಯವಾದ ಹಿನ್ನೆಲೆಯಲ್ಲಿ ನವೀಕರಣೆಗಾಗಿ ನೀಡಿದ ಪಾಸ್‌ಪೋರ್ಟ್ ನ್ನೇ ಪಡೆಯಲು ಕೆಸಿಎಫ್ ಕಾರ್ಯಕರ್ತರು ತೀವ್ರ ಶ್ರಮ ಮುಂದುವರಿಸಿ, ಕೇವಲ 24 ಗಂಟೆಯಲ್ಲೇ ಪಾಸ್‌ಪೋರ್ಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಕೂಡಲೇ ನಯಾಝ್ ಭಾಯಿ ಅವರನ್ನು ಊರಿಗೆ ಕಳಿಸಿಕೊಟ್ಟಿದ್ದಾರೆ. ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಕಾರ್ಯಕರ್ತರ ನಿರಂತರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನಯಾಝ್ ಭಾಯಿ ಮತ್ತು ಅವರ ಕುಟುಂಬಸ್ಥರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

error: Content is protected !! Not allowed copy content from janadhvani.com