ಬೆಂಗಳೂರು: ‘ಸೌದಿ ಅರೇಬಿಯಾದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯೊಬ್ಬರ ಪ್ರಕರಣದಲ್ಲಿ ತನಿಖೆಗೆ ಸೂಕ್ತ ಸಹಕಾರ ನೀಡುತ್ತಿಲ್ಲ ಎಂಬ ಮಂಗಳೂರು ಪೊಲೀಸರ ಆಕ್ಷೇಪವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಮತ್ತು ಭಾರತದಲ್ಲಿ ಫೇಸ್‌ಬುಕ್ ಕಾರ್ಯಚರಣೆ ಬಂದ್ ಮಾಡಲು ಆದೇಶ ಹೊರಡಿಸಬೇಕಾಗುತ್ತದೆ’ ಎಂದು ಹೈಕೋರ್ಟ್ ಕಠಿಣ ಎಚ್ಚರಿಕೆ ನೀಡಿದೆ.
ಈ ಸಂಬಂಧ ಮಂಗಳೂರಿನ ಬಿಕರ್ನಕಟ್ಟೆ ನಿವಾಸಿ ಶೈಲೇಶ್ ಕುಮಾರ ಪತ್ನಿ ಕವಿತಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
‘ಫೇಸ್‌ಬುಕ್ ಸಂಸ್ಥೆಯು ಒಂದು ವಾರದಲ್ಲಿ ಘಟನೆಯ ಕುರಿತು ಸೂಕ್ತ ಮಾಹಿತಿ ಒಳಗೊಂಡ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಭಾರತೀಯ ಪ್ರಜೆ ಸುಳ್ಳು ಪ್ರಕರಣದಲ್ಲಿ ವಿದೇಶದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಆತನ ಬಿಡುಗಡೆಗೆ ಯಾವೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಅಗತ್ಯ ಮಾಹಿತಿ ನೀಡಬೇಕು. ಮಂಗಳೂರು ಪೊಲೀಸರೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮರ್ಪಕ ತನಿಖೆ ಕೈಗೊಂಡು ವರದಿ ಸಲ್ಲಿಸಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ. ವಿಚಾರಣೆಯನ್ನು ಇದೇ 22ಕ್ಕೆ ಮುಂದೂಡಲಾಗಿದೆ.
ಏನಿದು ಪ್ರಕರಣ?
ಮಂಗಳೂರಿನ ಬಿಕರ್ನಕಟ್ಟೆಯ 45 ವರ್ಷದ ಶೈಲೇಶ್ ಕುಮಾರ್ ಹಲವು ವರ್ಷಗಳಿಂದ ಸೌದಿ ಅರೇಬಿಯಾದ ಅಲ್ ಕುಬೆ ಎಂಬಲ್ಲಿ ಉದ್ಯೋಗಿಯಾಗಿದ್ದಾರೆ. ಪತ್ನಿ ಮತ್ತು ಮಕ್ಕಳು ಬಿಕರನಕಟ್ಟೆಯಲ್ಲಿ ವಾಸ ಮಾಡುತ್ತಿದ್ದಾರೆ.
ಶೈಲೇಶ್ 2019ರಲ್ಲಿ ಕೇಂದ್ರ ಸರ್ಕಾರ ರೂಪಿಸಿದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯ್ದೆ (ಎನ್‌ಆರ್‌ಸಿ) ಬೆಂಬಲಿಸಿ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದರಿಂದ ಅವರಿಗೆ ಅನಾಮಿಕರಿಂದ ಬೆದರಿಕೆ ಬಂದಿತ್ತು. ಹಾಗಾಗಿ, ಅವರು ತಮ್ಮ ಫೇಸ್‌ಬುಕ್ ಖಾತೆಯನ್ನು ರದ್ದುಪಡಿಸಿದ್ದರು.
ಏತನ್ಮಧ್ಯೆ ಶೈಲೇಶ್ ಕುಮಾರ್ ಹೆಸರಿನಲ್ಲಿ 2020ರ ಫೆಬ್ರುವರಿಯಲ್ಲಿ ಅನಾಮಧೇಯ ವ್ಯಕ್ತಿಗಳು ನಕಲಿ ಫೇಸ್‌ಬುಕ್ ಖಾತೆ ತೆರೆದು ಸೌದಿ ಅರೇಬಿಯಾದ ದೊರೆ, ಅವರ ಧರ್ಮದ ಹೆಸರಿನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಇದು ತಮ್ಮ ಗಮನಕ್ಕೆ ಬಂದಕೂಡಲೇ ಶೈಲೇಶ್ ತಮ್ಮ ಸ್ನೇಹಿತರಿಗೆ ಮತ್ತು ಮಂಗಳೂರಿನ ಸಂಬಂಧಿಕರಿಗೆ ತಿಳಿಸಿದ್ದರು.
ಇದೇ ವೇಳೆ ಸೌದಿ ಪೊಲೀಸರು ಶೈಲೇಶ್ ಅವರನ್ನು ಬಂಧಿಸಿದ್ದರು. ಈ ಕುರಿತಂತೆ ಮಂಗಳೂರಿನಲ್ಲಿ ಪತ್ನಿ ಕವಿತಾ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡಿದ್ದ ಮಂಗಳೂರು ಪೊಲೀಸರು, ಫೇಸ್‌ಬುಕ್ ಸಂಸ್ಥೆಗೆ ಪತ್ರ ಬರೆದು, ಶೈಲೇಶ್ ಹೆಸರಿನಲ್ಲಿ ನಕಲಿ ಖಾತೆ ತೆರೆದವರ ಮಾಹಿತಿ ನೀಡುವಂತೆ ಕೋರಿದ್ದರು. ಅಂತೆಯೇ, ‘ನಿರಪರಾಧಿಯಾದ ನನ್ನ ಗಂಡನನ್ನು ಸೌದಿ ಜೈಲಿನಿಂದ ಬಿಡಿಸಲು ಕ್ರಮ ಜರುಗಿಸಿ’ ಎಂದು ಕೋರಿ ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದರು.
ಈ ಮನವಿ ಫಲ ನೀಡದ ಕಾರಣ ಅವರು, ‘ಪೊಲೀಸರು ನಿಧಾನಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ’ ಎಂದು ಆಕ್ಷೇಪಿಸಿ 2021ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಈ ಹಿಂದೆ ನೀಡಿದ್ದ ನಿರ್ದೇಶನದ ಅನುಸಾರ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಜೈನ್ ಹಾಗೂ ಪ್ರಕರಣದ ತನಿಖಾಧಿಕಾರಿ ಬುಧವಾರ ವಿಚಾರಣೆಗೆ ಖುದ್ದು ಹಾಜರಾಗಿದ್ದರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ