ಮಂಗಳೂರು: ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾ(Ullala Darga) ಆಡಳಿತ ಸಮಿತಿ ಅವಧಿ ಮುಕ್ತಾಯ ಗೊಂಡಿದ್ದು, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು(Karnataka Waqf Board) ಹೊಸ ಆಡಳಿತ ಸಮಿತಿ ಆಯ್ಕೆಗಾಗಿ ಚುನಾವಣೆ ನಡೆಸಲು ಮುಂದಾಗಿದೆ.
ಏತನ್ಮಧ್ಯೆ ವಖ್ಫ್ ಮಂಡಳಿಯ ಆದೇಶಕ್ಕೆ ವಿರುದ್ಧವಾಗಿ, ಚುನಾವಣೆ ನಡೆಸದಂತೆ ಮಧ್ಯಂತರ ಆದೇಶ ನೀಡುವಂತೆ ಹೈಕೋರ್ಟ್ ಗೆ ಸಲ್ಲಿಸಲಾದ ಅರ್ಜಿಯನ್ನು ಮಾನ್ಯ ಹೈಕೋರ್ಟ್(High Court of Karnataka) ವಜಾ ಮಾಡಿದ್ದು, ವಖ್ಫ್ ಮಂಡಳಿಯ ಆದೇಶವನ್ನು ಪುರಸ್ಕರಿಸಿದೆ. ದಿನಾಂಕ 25-2-2023 ರಂದು ಚುನಾವಣೆ ನಡೆಸಲು ವಖ್ಫ್ ಮಂಡಳಿ ತೀರ್ಮಾನಿಸಿದೆ.
ಉಳ್ಳಾಲ ದರ್ಗಾ ಸಮಿತಿಯ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ರಾಜ್ಯ ವಕ್ಫ್ ಮಂಡಳಿಯು ದಿನಾಂಕ 18-11-2022 ರಂದು ಅಧಿಸೂಚನೆ ಹೊರಡಿಸಿದ್ದು , ಕಾನೂನು ಪ್ರಕಾರ ಸದಸ್ಯತ್ವ ನೋಂದಾವಣಿಗೆ 21-11-2022 ರಿಂದ 21-12-2022 ವರೆಗೆ ಕಾಲಾವಕಾಶ ನೀಡಿ ಮತ್ತು ಅಂತಿಮ ಪಟ್ಟಿಯ ಬಿಡುಗಡೆಗೆ ಪ್ರಕಟಣೆ ಹೊರಡಿಸಿತ್ತು. ಆನಂತರ, ದಿನಾಂಕ 18-12-2022 ರಂದು ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದ್ದು , ದಿನಾಂಕ 25-2-2023 ರಂದು ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ.
ಈ ಮದ್ಯೆ , ಅಂತಿಮ ಕರಡು ಪಟ್ಟಿಯ ಪ್ರಕ್ರಿಯೆ ಮುಗಿದು ನಾಮಿನೇಷನ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದಾಗ,ಕಾನೂನು ಪ್ರಕಾರ ನಡೆಯುತ್ತಿರುವ ಚುನಾವಣೆಗೆ ಅಡ್ಡಿ ಪಡಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಹೈ ಕೋರ್ಟ್ನಲ್ಲಿ ಒಬ್ಬರು ಒಂದು ರಿಟ್ ಅರ್ಜಿ ದಾಖಲಿಸಿ ಚುನಾವಣಾ ಪ್ರಕ್ರಿಯೆಗೆ ತಡೆಯಾಗಿ ಯಥಾಸ್ಥಿತಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಆದರೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಶೀಘ್ರ ನಡೆಯಲ್ಲಿ ಮಾನ್ಯ ಹೈ ಕೋರ್ಟ್ ಪ್ರಸ್ತುತ ರಿಟ್ ಅರ್ಜಿಯನ್ನು ದಿನಾಂಕ 2/2/23 ರಂದು ವಿಚಾರಣೆ ನಡೆಸಿ, ಅರ್ಜಿದಾರರು ಅರ್ಜಿಯಲ್ಲಿ ಕೇಳಿದಂತಹ ಸದಸ್ಯತ್ವ ನೋಂದಾವಣಿಗೆ ಹೆಚ್ಚಿನ ಕಾಲಾವಕಾಶ ಕೋರಿದ ಮನವಿಯನ್ನು ತಳ್ಳಿ ಹಾಕಿ ಮಾನ್ಯ ನ್ಯಾಯಾಲಯವು ಉಳ್ಳಾಲ ದರ್ಗಾ ಕ್ಕೆ ಸಂಬಂಧಪಟ್ಟಂತೆ ಪ್ರಸ್ತುತ, ದರ್ಗಾದಲ್ಲಿ ಕಾನೂನಿನ ಪ್ರಕಾರ ಆಡಳಿತ ಸಮಿತಿ ಇಲ್ಲವೆಂದೂ ಅಲ್ಲಿ ಚುನಾವಣೆ ನಡೆಸಿ ಹೊಸ ಸಮಿತಿ ರಚನೆ ಅಗತ್ಯ ಎಂದೂ ಆದೇಶ ಹೊರಡಿಸಿತ್ತು .ಮತ್ತು ರಿಟ್ ಅರ್ಜಿ ಸಂಖ್ಯೆwp 1946 /23 ಅರ್ಜಿಯನ್ನು ವಜಾ ಮಾಡಿತ್ತು.
ತದನಂತರ ನಾಮಿನೇಷನ್ ಮುಕ್ತಾಯ ಗೊಂಡು ಇದೀಗ ಮುಂದಿನ ಪ್ರಕ್ರಿಯೆ ಚಾಲ್ತಿಯಲ್ಲಿದೆ .
ಈ ಮದ್ಯೆ ಯು. ಸಿದ್ದಿಕ್ ಎಂಬವರು ಮಾನ್ಯ ಹೈ ಕೋರ್ಟ ನಲ್ಲಿ ಇನ್ನೊಂದು ಅರ್ಜಿ ಸಲ್ಲಿಸಿ ತಾನು ಮೊಹಲ್ಲಾ ಮಸೀದಿಯಲ್ಲಿ ಪಾರಂಪರ್ಯವಾಗಿ ವಂತಿಗೆ ಕೊಡುತ್ತಿದ್ದು , ದರ್ಗಾ ಆಡಳಿತ ಸಮಿತಿ ಆಯ್ಕೆ ಪ್ರಕ್ರಿಯೆಗೆ ಪ್ರತ್ಯೇಕ ಸದಸ್ಯತ್ವ ನೊಂದಾವಣಿಗೆ ಫೀ ಕೊಡುವಂತಿಲ್ಲ ಎಂದು ವಾದ ಮಂಡಿಸಿ ಚುನಾವಣೆಗೆ ಮಧ್ಯಂತರ ತಡೆ ಆದೇಶ ಕೋರಿದ್ದರು. ಮಾನ್ಯ ನ್ಯಾಯಾಲಯ ಮಧ್ಯಂತರ ಆದೇಶ ನಿರಾಕರಿಸಿ ದಿನಾಂಕ 7/2 /23 ರಂದು ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.
ಅರ್ಜಿದಾರರ ಪರ ವಕೀಲರು ಹಾಜರಾಗಿ , ದರ್ಗಾ ಸಮಿತಿಗೆ ಚುನಾವಣೆ ನಡೆಸುವುದು ವಕ್ಫ್ ಕಾನೂನಿಗೆ ವಿರುದ್ಧ ಎಂದೂ , ಪ್ರಸ್ತುತ ಆಡಳಿತ ಸಮಿತಿಗೆ ಸೆಲೆಕ್ಷನ್ ಮುಖಾಂತರ ಸಮಿತಿಯನ್ನು ಆಯ್ಕೆ ಮಾಡಲು ಅವಕಾಶ ಇದೆ ಎಂದೂ ವಾದಿಸಿದರು. ವಖ್ಫ್ ಮಂಡಳಿಯು ಆಡಳಿತ ಸಮಿತಿಯ ಕಾರ್ಯ ವೈಖರಿಯಲ್ಲಿ ಮೂಗು ತೂರಿಸಿ, ಚುನಾವಣೆ ಕಾರ್ಯದಲ್ಲಿ ತೊಡಗಿಸಿದೆ ಎಂದೂ ವಾದ ಮಂಡಿಸಿದರು.
ವಕ್ಫ್ ಮಂಡಳಿಯ ಪರ ವಕೀಲರು, ಮಾನ್ಯ ನ್ಯಾಯಾಲಯಕ್ಕೆ ಕರ್ನಾಟಕ ವಕ್ಫ್ ರೂಲ್ಸ್ ಬಗ್ಗೆ ಮನವರಿಕೆ ಮಾಡಿ, ಪ್ರಸ್ತುತ ಆಡಳಿತ ಸಮಿತಿಯು ಸ್ವಯಂ ಘೋಷಿತವಾಗಿ 2016 ರಿಂದ ಕಾರ್ಯ ನಿರ್ವಹಿಸುತ್ತಿದ್ದು ಇದರ ಆಡಳಿತ ಅವಧಿಯು 2019 ಕ್ಕೆ ಮುಕ್ತಾಯ ಗೊಂಡಿದ್ದರಿಂದ, ರೂಲ್ 54 (2) ಎ ಪ್ರಕಾರ ಸೆಲೆಕ್ಷನ್ ಗೆ ಅವಕಾಶ ಇಲ್ಲ ಎಂದು ಮತ್ತು54 (4) ಎ ಪ್ರಕಾರ ಚುನಾವಣೆ ನಡೆಸುವುದು ಒಂದೇ ದಾರಿ ಎಂದು ವಾದ ಮಂಡಿಸಿದರು.
ಮಾನ್ಯ ಹೈ ಕೋರ್ಟ್, ವಕ್ಫ್ ಮಂಡಳಿ ಪರ ವಕೀಲರ ವಾದವನ್ನು ಪುರಸ್ಕರಿಸಿ ಅರ್ಜಿದಾರರ ರಿಟ್ ಅರ್ಜಿ ಸಂಖ್ಯೆ 1828 / 23 ಅನ್ನು ವಜಾಗೊಳಿಸಿದೆ. ಪ್ರಸ್ತುತ, ದರ್ಗಾ ಸಮಿತಿಗೆ ಕಾನೂನು ಪ್ರಕಾರ ಚುನಾವಣೆ ಅಲ್ಲದೆ ಬೇರೆ ದಾರಿ ಇಲ್ಲ , ವಕ್ಫ್ ಮಂಡಳಿಯು ಚುನಾವಣೆ ನಡೆಸಿ ಹೊಸ ಸಮಿತಿಯ ಆಯ್ಕೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದೆ.
ವರದಿ: ಯು. ಅಬ್ದುಲ್ಲ ಉಳ್ಳಾಲ