ಮೊಂಟೆಪದವು: ಬ್ರಿಕ್ ಸ್ಟೋನ್ ಕಂಪೆನಿ ಸೌದಿ ಅರೇಬಿಯಾ ಪ್ರಾಯೋಜಕತ್ವದಲ್ಲಿ, ಬ್ಲಡ್ ಡೋನರ್ಸ್ ಮಂಗಳೂರು ರಿ ಸಹಕಾರದೊಂದಿಗೆ ಬ್ರಿಕ್-ಬಿಡಿಎಮ್ ಆಸರೆ ಎಂಬ ಕಾರ್ಯಕ್ರಮವು ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಬೃಹತ್ ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ, ದಿವ್ಯಾಂಗರಿಗೆ ಸವಲತ್ತು ವಿತರಣೆ, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ, ಯುವಜನತೆ ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಸಮಾಜದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯ ಎಂದು ಶಾಸಕ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚಿಂತಕ ಮುಬೀನ್ ಅಬ್ದುಲ್ ಗಫ್ಫಾರ್ ಮಾತನಾಡಿ, ಸಸ್ಯಗಳಿಗೆ ನೀರಿನ ಅಗತ್ಯ, ಮನುಷ್ಯರಿಗೆ ರಕ್ತ ಅತ್ಯಗತ್ಯ. ಮನುಷ್ಯ ಕಷ್ಟದಲ್ಲಿರುವಾಗ ಆತನಿಗಾಗಿ ಕೊರಗದವರು ಮನುಷ್ಯರೇ ಅಲ್ಲ. ಪ್ರಾಯ ಕಳೆದಾಗ ರಕ್ತದಾನ ಅಸಾಧ್ಯ. ಪ್ರಸ್ತುತ ದಿನಗಳಲ್ಲಿ ಸಮಾಜದ ರಕ್ಷಣೆಗಾಗಿ ಇಂತಹ ಶಿಬಿರಗಳು ನಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ದಿವ್ಯಾಂಗರಿಗೆ ಗಾಲಿಕುರ್ಚಿ, ವಿವಿಧ ಪರಿಕರಗಳನ್ನು ಬ್ರಿಕ್ ಸ್ಟೋನ್ ಸೌದಿ ಅರೇಬಿಯಾ ಪ್ರಾಯೋಜಕತ್ವದಲ್ಲಿ ವಿತರಿಸಲಾಯಿತು.
ಬ್ಲಡ್ ಡೋನರ್ಸ್ ಸ್ಥಾಪಕಾಧ್ಯಕ್ಷ ಸಿದ್ದೀಕ್ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು. ಹೃದ್ರೋಗ ತಜ್ಞ ಡಾ.ಮುಕುಂದ್ ಕುಂಬ್ಲೆ, ಬ್ರಿಕ್ ಸ್ಟೋನ್ ಇದರ ಮಾಲಕರಾದ ಅಬೂಬಕ್ಕರ್, ಸಿ.ಇ.ಒ ಅರ್ಷಕ್ ಇಸ್ಮಾಯಿಲ್, ಯೇನೆಪೊಯ ವಿ.ವಿ ಎನ್. ಎಸ್.ಎಸ್ ಸಂಯೋಜಕಿ ಡಾ. ಅಶ್ವಿನಿ ಶೆಟ್ಟಿ, ಚಿಂತಕ ಮುಬೀನ್ ಅಬ್ದುಲ್ ಗಫ್ಫಾರ್, ಕರ್ನಾಟಕ ಪಬ್ಲಿಕ್ ಸ್ಕೂಲ್ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್ ಮೋಂಟುಗೋಳಿ, ಪ್ರಾಚಾರ್ಯ ಸುರೇಶ್ ಎಂ.ಕೆ., ವೈಸ್ ಪ್ರಿನ್ಸಿಪಾಲ್ ಸಂತೋಷ್ ಕುಮಾರ್ ಟಿ.ಎಂ., ಮುಖ್ಯಶಿಕ್ಷಕಿ ಪ್ರಮೀಳಾ ಬಿ.ಸಿ., ಪ್ರೌಢಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮುರಳೀಧರ ಶೆಟ್ಟಿ ಮೋರ್ಲ, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹನೀಫ್ ಚಂದಹಿತ್ಲು, ನರಿಂಗಾನ ಗ್ರಾಮ ಪಂಚಾಯಿತಿ ಸದಸ್ಯರಾದ ರಹ್ಮಾನ್ ಚಂದಹಿತ್ಲು, ಉದ್ಯಮಿ ಹನೀಫ್ ಶೈನ್, ನರಿಂಗಾನ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ, ಬ್ಲಡ್ ಡೋನರ್ಸ್ ಪ್ರದಾನ ಕಾರ್ಯದರ್ಶಿ ನವಾಝ್ ಕಲ್ಲರಕೋಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಎರಡು ವಿಶೇಷ ಚೇತನರಿದ್ದ ಸಂಪೂರ್ಣ ಕುಟುಂಬವನ್ನು ಜೀವನ ಪರ್ಯಂತ ನಿರ್ವಹಣೆ ಮಾಡುವ ಮಹತ್ತರ ಜವಬ್ದಾರಿ ಹೊತ್ತು ದತ್ತು ಸ್ವೀಕರಿಸಲಾಯಿತು. ನುರಾರು ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿ ವೈದ್ಯಕೀಯ ತಪಾಸಣೆ ಮಾಡಿ, ಸುಮಾರು ಐವತ್ತಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.
ಕಾರ್ಯಕ್ರಮವನ್ನು ರಜ್ಜಾಕ್ ಸಾಲ್ಮರ ನಿರೂಪಿಸಿದರು. ನವಾಝ್ ಕಲ್ಲರಕೋಡಿ ಸ್ವಾಗತಿಸಿ, ಹಮೀದ್ ಫಜೀರ್ ವಂದಿಸಿದರು.