janadhvani

Kannada Online News Paper

ಯುಎಇ ಪ್ರಯಾಣಕ್ಕೆ ಪಾಸ್‌ಪೋರ್ಟ್‌ನಲ್ಲಿ ದ್ವಿತೀಯ ನಾಮ ಹೊಂದಿರಬೇಕು- ಏರ್ ಇಂಡಿಯಾ ಎಕ್ಸ್‌ಪ್ರೆಸ್

ನಿವಾಸ ಅಥವಾ ಉದ್ಯೋಗ ವೀಸಾಗಳನ್ನು ಹೊಂದಿರುವವರಿಗೆ ಇದು ಅನ್ವಯಿಸುವುದಿಲ್ಲ

ದುಬೈ : ಯುಎಇ(UAE) ಗೆ ಮತ್ತು ಅಲ್ಲಿಂದ ಪ್ರಯಾಣಿಸುವವರು ತಮ್ಮ ಪಾಸ್‌ಪೋರ್ಟ್‌ಗಳಲ್ಲಿ ಪ್ರಾಥಮಿಕ (ಮೊದಲ ಹೆಸರು) ಮತ್ತು ದ್ವಿತೀಯ (ಉಪನಾಮ) ಹೆಸರುಗಳನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ಸೋಮವಾರ ಪ್ರಕಟಿಸಿದೆ.

ವಿಮಾನಯಾನ ಸಂಸ್ಥೆಗಳು ಹೊಸ ನಿಯಮವನ್ನು ಜಾರಿಗೆ ತಂದ ನಂತರ ಪಾಸ್‌ಪೋರ್ಟ್‌ಗಳಲ್ಲಿ ತಮ್ಮ ಮೊದಲ ಹೆಸರನ್ನು ಮಾತ್ರ ಹೊಂದಿರುವ ಹಲವಾರು ಭಾರತೀಯ ನಾಗರಿಕರು ದೇಶದ ವಿಮಾನ ನಿಲ್ದಾಣಗಳಿಂದ ಯುಎಇ ಗೆ ಪ್ರಯಾಣಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಖಲೀಜ್ ಟೈಮ್ಸ್ (Khaleej Times) ವರದಿ ಮಾಡಿದೆ.

ದುಬೈ ನಿವಾಸ ವಿಸಾ ಹೊಂದಿರುವ ಝಹ್ರಾ ಅವರ ಹೇಳಿಕೆಯಂತೆ, “ಭಾರತದ ಮಂಗಳೂರು ವಿಮಾನ ನಿಲ್ದಾಣದಿಂದ ದುಬೈಗೆ ಬರಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ನನ್ನ ಸೋದರಸಂಬಂಧಿಯನ್ನು ಪಾಸ್‌ಪೋರ್ಟ್‌ನಲ್ಲಿ ಉಪನಾಮ ಹೊಂದಿರದ ಕಾರಣ ಪ್ರಯಾಣ ತಡೆಹಿಡಿಯಲಾಯಿತು. ನನ್ನ ತಾಯಿಯ ಪಾಸ್‌ಪೋರ್ಟ್‌ನಲ್ಲೂ ಉಪನಾಮವಿಲ್ಲ, ಅವರು ಪ್ರಸ್ತುತ ಯುಎಸ್‌ನಲ್ಲಿದ್ದಾರೆ. ಮತ್ತು ಯುಎಇಗೆ ಪ್ರಯಾಣಿಸಲಿದ್ದಾರೆ. ಈಗ ನನ್ನ ಕುಟುಂಬವು ಅವರಿಗೆ ದುಬೈಗೆ ಪ್ರಯಾಣಿಸಲು ಅನುಮತಿಸಬಹುದೇ ಎಂಬ ಚಿಂತೆಯಲ್ಲಿದ್ದಾರೆ. ಹೆಸರು ಸೇರ್ಪಡೆಗೆ ಸಮಯಾವಕಾಶ ನೀಡಿದ್ದರೆ ಎಲ್ಲವನ್ನೂ ಪರಿಹರಿಸಲು ಸಾಧ್ಯವಾಗುತ್ತಿತ್ತು” ಎಂದು ಝಹ್ರಾ ಹೇಳಿದರು.

ದುಬೈ ದೇರಾ(Deira Dubai) ಟ್ರಾವೆಲ್ಸ್‌ನ ವಕ್ತಾರ ಫರ್ದಾನ್ ಹನೀಫ್, ಈ ಕುರಿತು ನೋಟಿಸ್ ಕಳುಹಿಸಿರುವ ಹಲವು ವಿಮಾನಯಾನ ಸಂಸ್ಥೆಗಳಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್(Air India Express) ಕೂಡ ಒಂದು ಎಂದು ಖಚಿತಪಡಿಸಿದ್ದಾರೆ. “ಇಂಡಿಗೋ ಏರ್‌ಲೈನ್ಸ್‌ನಿಂದ(Indigo Airlines) ಉಪನಾಮ ಇಲ್ಲದವರಿಗೆ ಪ್ರಯಾಣಿಸಲು ಅವಕಾಶವಿಲ್ಲ ಎಂದು ನಮಗೆ ನೋಟಿಸ್ ಬಂದಿದೆ” ಎಂದು ಅವರು ಹೇಳಿದರು. ಅದೇ ಸಮಸ್ಯೆಯಿಂದಾಗಿ ಪ್ರಯಾಣಿಸದಂತೆ ತಡೆಯಲಾದ ಮಹಿಳೆಯಿಂದ ನಾವು ಕರೆ ಸ್ವೀಕರಿಸಿದ್ದೇವೆ ಎಂದು ಹೇಳಿದರು.

ಪ್ರವಾಸಿ ಅಥವಾ ಭೇಟಿ ವೀಸಾದಲ್ಲಿ(Tourist and Visit Visa) ಪ್ರಯಾಣಿಸುವವರಿಗೆ ಈ ನಿಯಮ ಅನ್ವಯಿಸುತ್ತದೆ ಆದರೆ ನಿವಾಸ(Residence Visa) ಅಥವಾ ಉದ್ಯೋಗ(Employment) ವೀಸಾಗಳನ್ನು ಹೊಂದಿರುವವರನ್ನು ಹೊರತುಪಡಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ರೈನಾ ಟೂರ್ಸ್ ಮತ್ತು ಟ್ರಾವೆಲ್ಸ್‌ನ ಕಾಲ್ ಸೆಂಟರ್ ಪ್ರತಿನಿಧಿಯೊಬ್ಬರು, ನಿಯಮ ಬದಲಾವಣೆಯು ಪ್ರಾಥಮಿಕವಾಗಿ ಭಾರತದಿಂದ ಭೇಟಿ ವೀಸಾದಲ್ಲಿ ಯುಎಇಗೆ ಬರುವವರಿಗೆ ಅನ್ವಯಿಸುತ್ತದೆ ಎಂದು ಹೇಳಿದರು. ” ಯುಎಇ ರೆಸಿಡೆನ್ಸಿ ಹೊಂದಿದ್ದರೆ, ಅದು ತೊಂದರೆಯಾಗುವುದಿಲ್ಲ” ಎಂದು ಅವರು ಹೇಳಿದರು. “ಈ ಸಮಸ್ಯೆಗೆ ಸಂಬಂಧಿಸಿದಂತೆ ನಾವು ಇನ್ನೂ ರಾಯಭಾರ ಕಚೇರಿಯಿಂದ ಮಾಹಿತಿಗಾಗಿ ಕಾಯುತ್ತಿದ್ದೇವೆ. ಆದ್ದರಿಂದ ಪ್ರಸ್ತುತ, ವೀಸಾಕ್ಕೆ ಅರ್ಜಿ ಸಲ್ಲಿಸುವ ಮೊದಲು 48 ಗಂಟೆಗಳ ಕಾಲ ಕಾಯಲು ನಾವು ಜನರಿಗೆ ಸಲಹೆ ನೀಡುತ್ತಿದ್ದೇವೆ.

“ಉಪನಾಮಗಳಿಲ್ಲದ ಜನರು, ಗೊಂದಲವನ್ನು ತಪ್ಪಿಸಲು ನಾವು ಅವರ ತಂದೆ ಅಥವಾ ಸಂಗಾತಿಯ ಹೆಸರನ್ನು ಸೇರಿಸಲು ಸಲಹೆ ನೀಡುತ್ತಿದ್ದೇವೆ” ಎಂದು ಅವರು ಹೇಳಿದರು. “ಆದಾಗ್ಯೂ, ನಾವು ಇನ್ನೂ ವಿವರಗಳಿಗಾಗಿ ಕಾಯುತ್ತಿರುವುದರಿಂದ, ಜನರು ತಮ್ಮ ದಾಖಲಾತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಮೊದಲು ಕಾಯಲು ನಾವು ಕೇಳುತ್ತಿದ್ದೇವೆ.”

ಟ್ರಾವೆಲ್ ಏಜೆಂಟ್‌ಗಳ ಪ್ರಕಾರ, ಹೊಸ ನಿಯಮವು ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಸೇರಿದಂತೆ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಅನ್ವಯಿಸುತ್ತದೆ.

error: Content is protected !! Not allowed copy content from janadhvani.com